ಗುರುವಾರ , ಜೂನ್ 30, 2022
22 °C
ಪೊಟಾಷ್‌ಗೆ ಹೆಚ್ಚಿದ ಬೇಡಿಕೆ: ಪೂರೈಕೆಯಲ್ಲಿ ವ್ಯತ್ಯಯ

ಮುಂಗಾರು ಹಂಗಾಮಿಗೆ ಮುನ್ನ ರಸಗೊಬ್ಬರ ಕೊರತೆ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ರಸಗೊಬ್ಬರ ಕೊರತೆಯಾಗಬಹುದೆಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ. 

ಹೆಚ್ಚುತ್ತಿರುವ ದರ ಮತ್ತು ಪೂರೈಕೆಯಲ್ಲಿ ವ್ಯತ್ಯಾಸಗಳಿಂದ ಕೃಷಿಕರು ಕಂಗಾಲಾಗಿದ್ದಾರೆ. ಸಕಾಲಕ್ಕೆ ರಸಗೊಬ್ಬರ ಸಿಗುತ್ತಿಲ್ಲ ಎನ್ನುವ ದೂರುಗಳು ನಾಡಿನ ನಾನಾ ಕಡೆಗಳಿಂದ ಕೇಳಲಾರಂಭಿಸಿದೆ. ದಿನೇ ದಿನೇ ರಸಗೊಬ್ಬರ ಸಮಸ್ಯೆ ಹೆಚ್ಚುತ್ತಿದ್ದು, ರೈತರು ಅಂಗಡಿಗಳ ಎದುರು ಕಾದು ನಿಲ್ಲಬೇಕಾದ ಸ್ಥಿತಿ ಸೃಷ್ಟಿಯಾಗುತ್ತಿದೆ. ಹಲವೆಡೆ ಪೂರೈಕೆಯಾದ ತಕ್ಷಣವೇ ಖಾಲಿಯಾಗುತ್ತಿದೆ.

ಬೇಡಿಕೆಯುಕ್ತ ಪೊಟಾಷ್‌ ಸೇರಿದಂತೆ ವಿವಿಧ ಮಾದರಿ ಮಿಶ್ರಣದರಸಗೊಬ್ಬರ ದಾಸ್ತಾನು ಪ್ರಮಾಣದಲ್ಲೂ ಕೊರತೆಯಾಗಿದೆ. ಬಿತ್ತನೆ ಸಮಯದಲ್ಲಿ ಬೀಜ, ಸಸಿಯೊಂದಿಗೆ ನೀಡುವ ಡಿಎಪಿ ಮತ್ತು ಎನ್‌ಪಿಕೆ ಮಿಶ್ರಣದ ರಸಗೊಬ್ಬರ ಬೆಲೆಯೂ ಗಗನಕ್ಕೇರಿದೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಆರಂಭವಾದ ಸಮಸ್ಯೆ ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೆಲವು ಭಾಗಗಳಲ್ಲಿ ಯೂರಿಯಾ ಕೊರತೆ ಇದ್ದರೆ, ಇನ್ನು ಕೆಲವೆಡೆ ಡಿಎಪಿ ಕೊರತೆ ತಲೆದೋರಿದೆ ಎನ್ನುವುದು ರೈತರ ದೂರು.

ಕಾಂಪ್ಲೆಕ್ಸ್‌ ರಸಗೊಬ್ಬರಗಳು ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ (ಎನ್‌ಪಿಕೆ) ಒಳಗೊಂಡಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಶೇ 30ರಷ್ಟು ಕಾಂಪ್ಲೆಕ್ಸ್‌ ರಸಗೊಬ್ಬರ ಬಳಕೆ ಹೆಚ್ಚಾಗಿದೆ. 2019–20ರಲ್ಲಿ ಕರ್ನಾಟಕದಲ್ಲಿ 7.6 ಲಕ್ಷ ಟನ್‌ ಕಾಂಪ್ಲೆಕ್ಸ್‌ ರಸಗೊಬ್ಬರವನ್ನು ಬಳಕೆ ಮಾಡಲಾಗಿತ್ತು 2020–21ರಲ್ಲಿ 10 ಲಕ್ಷ ಟನ್‌ ಬಳಕೆಯಾಗಿತ್ತು. 2021–22ರಲ್ಲಿ 11 ಲಕ್ಷ ಟನ್‌ಗೂ ಹೆಚ್ಚು ರಸಗೊಬ್ಬರ ಬಳಕೆಯಾಗಿತ್ತು.

‘2021ರ ಏಪ್ರಿಲ್‌ವರೆಗೆ ರಸಗೊಬ್ಬರಕ್ಕೆ ನಿರ್ದಿಷ್ಟ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸುವ ಪದ್ಧತಿ ಇತ್ತು. 2021ರ ಏಪ್ರಿಲ್‌ ನಂತರ ವಾರಕ್ಕೊಮ್ಮೆ, 15 ದಿನಗಳಿಗೊಮ್ಮೆ ದರಗಳನ್ನು ಬದಲಾವಣೆ ಮಾಡುತ್ತ ಬಂದಿದೆ. 50 ಕೆ.ಜಿ ತೂಕದ ಪೊಟ್ಯಾಷ್‌ಗೆ ₹850 ದೊರೆಯುತ್ತಿತ್ತು. ಕಳೆದ ವರ್ಷದ ದೀಪಾವಳಿ ವೇಳೆಗೆ ಇದು ₹1,040ಕ್ಕೆ ತಲುಪಿತು. ಕಾಂಪ್ಲೆಕ್ಸ್‌ ರಸಗೊಬ್ಬರ ₹1,075ಕ್ಕೆ ಹೆಚ್ಚಾಯಿತು. ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಚೀಲಕ್ಕೆ ₹300ರಿಂದ ₹350ರಷ್ಟು ಹೆಚ್ಚಾಗಿದೆ’ ಎಂದು ಚಿಕ್ಕಮಗಳೂರಿನ ರಸಗೊಬ್ಬರ ಮಾರಾಟಗಾರರೊಬ್ಬರು ವಿವರಿಸಿದರು.

‘ಸೆಪ್ಟೆಂಬರ್‌ ನಂತರ 100 ಚೀಲಗಳಿಗೆ ಬೇಡಿಕೆ ಸಲ್ಲಿಸಿದರೆ ಕೇವಲ 10ರಿಂದ 20 ಚೀಲ ಮಾತ್ರ ಪೂರೈಕೆಯಾಗುತ್ತಿದೆ. ನಮಗೆ ಮೂರು ತಿಂಗಳಲ್ಲಿ 500 ಚೀಲ ಕಳುಹಿಸಿದ್ದಾರೆ’ ಎಂದರು.

‘ಸದ್ಯ 6.52 ಲಕ್ಷ ಟನ್‌ ದಾಸ್ತಾನು’

ಪ್ರಸ್ತುತ 6.52 ಲಕ್ಷ ಟನ್‌ ಪ್ರಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ಲಭ್ಯವಿದೆ. ಹೀಗಾಗಿ, ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯೂರಿಯಾ 3.5 ಲಕ್ಷ ಮೆಟ್ರಿಕ್‌ ಟನ್‌, ಡಿಎಪಿ 0.61 ಲಕ್ಷ ಮೆಟ್ರಿಕ್ ಟನ್‌, ಎಂಒಪಿ 0.17 ಲಕ್ಷ ಮೆಟ್ರಿಕ್‌ ಟನ್‌ ಮತ್ತು ಕಾಂಪ್ಲೆಕ್ಸ್‌ 2.24 ಲಕ್ಷ ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಲಭ್ಯ ಇದೆ ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಕೃಷಿಕರಿಗೆ ಸರಬರಾಜು ಮಾಡಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

‘100 ಚೀಲ ಕೇಳಿದರೆ 5 ಚೀಲ ಬರುತ್ತದೆ’

‘ಕಚ್ಚಾ ವಸ್ತುಗಳು ದುಬಾರಿಯಾಗಿರುವುದರಿಂದ ರಸಗೊಬ್ಬರ ಉತ್ಪಾದನೆ ಮೇಲೆಯೇ ಪರಿಣಾಮ ಬೀರಿದೆ ಹೀಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊರತೆಯಾಗಿರುವುದು ನಿಜ. ನಾವು 100 ಚೀಲ ಬೇಡಿಕೆ ಸಲ್ಲಿಸಿದರೆ 5 ಚೀಲ ಪೂರೈಸುತ್ತಾರೆ’ ಎಂದು ಹೊಳೆನರಸೀಪುರದ ಮಾರಾಟಗಾರರೊಬ್ಬರು ವಿವರಿಸಿದರು.‘ಒಂದು ಚೀಲ ಪೊಟ್ಯಾಷ್‌ ಬೆಲೆ ಕಳೆದ ವರ್ಷ ₹850 ಇತ್ತು. ಈಗ ಅದು ₹1,700ಕ್ಕೆ ತಲುಪಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು