ಗುರುವಾರ , ಜೂನ್ 24, 2021
29 °C

5 ವರ್ಷಗಳಲ್ಲಿ ₹ 35 ಲಕ್ಷ ಕೋಟಿ ಜಿಡಿಪಿ ರಾಜ್ಯ ಸರ್ಕಾರದ ಗುರಿ: ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್, ನೆರೆ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಕರ್ನಾಟಕದ ಜಿಡಿಪಿ ಸದೃಢ ಮತ್ತು ಸುಸ್ಥಿರವಾಗಿ ಬೆಳೆಯುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅದರ ಪ್ರಮಾಣ ₹ 35 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ವಪ್ರಯತ್ನ ನಡೆದಿದೆ’ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸ್ಪೇರ್ ಟ್ರಾವೆಲ್ ಮೀಡಿಯಾ ಮತ್ತು ಎಕ್ಸಿಬೀಷನ್ ಸಂಸ್ಥೆ ಆಯೋಜಿಸಿದ್ದ ‘ಭವಿಷ್ಯದ ಕರ್ನಾಟಕ ಶೃಂಗಸಭೆ- 2020’ಯಲ್ಲಿ ಆನ್‌ಲೈನ್‌ನಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಈಗಾಗಲೇ ರಾಜ್ಯವು ₹ 18 ಲಕ್ಷ ಕೋಟಿ ಜಿಡಿಪಿ ಹೊಂದಿದೆ. ಐದು ವರ್ಷಗಳಲ್ಲಿ ಇದರ ಪ್ರಮಾಣ ₹ 36 ಲಕ್ಷ ಕೋಟಿ ದಾಟಲಿದೆ. ನಂತರದ ಐದು ವರ್ಷಗಳಲ್ಲಿ ₹ 75 ಲಕ್ಷ ಕೋಟಿ ಜಿಡಿಪಿ ಹೊಂದುವುದು ನಮ್ಮ ಗುರಿ’ ಎಂದರು.

‘ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿ, ಐಟಿ-ಬಿಟಿ, ಕೈಗಾರಿಕೆ, ಉತ್ಪಾದನೆ ಹಾಗೂ ಸೇವಾ ವಲಯಗಳಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಐದು ವರ್ಷಗಳಲ್ಲಿ ನಿಗದಿತ ಮೈಲುಗಲ್ಲು ದಾಟಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಮೈಸೂರು- ಬೀದರ್ ಕಾರಿಡಾರ್: ‘ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಮೈಸೂರು- ಬೀದರ್ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಇರುವ ಬೆಂಗಳೂರು- ಚೆನ್ನೈ ಮತ್ತು ಬೆಂಗಳೂರು- ಮುಂಬಯಿ ಕಾರಿಡಾರ್‌ಗಳಂತೆ ಈ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

‘ಇದೇ ರೀತಿಯಲ್ಲಿ ಕೈಗಾರಿಕೆ ಭೂಮಿ ಪಡೆಯುವುದು ಸೇರಿದಂತೆ ಬೇರೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆಗಳ ಸರಳೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಅತ್ಯಂತ ಸರಳವಾಗಿದೆ’ ಎಂದು ಅವರು ಹೇಳಿದರು.

ಏಕಗವಾಕ್ಷಿ ವ್ಯವಸ್ಥೆ: ‘ಇಡೀ ದೇಶದಲ್ಲಿಯೇ ಕೈಗಾರಿಕೆ ಕ್ಷೇತ್ರದಲ್ಲಿ ರಾಜ್ಯ ಅತ್ಯಂತ ಮಾದರಿ ನೀತಿಯನ್ನು ಅನುಸರಿಸುತ್ತಿದೆ. ಯಾವುದೇ ಕೈಗಾರಿಕೆಯನ್ನಾಗಲಿ, ಅದು ಎಷ್ಟೇ ದೊಡ್ಡ ಕೈಗಾರಿಕೆಯನ್ನಾಗಲಿ ಈ ನೆಲದ ಕಾನೂನನ್ನು ಗಮನದಲ್ಲಿಟ್ಟುಕೊಂಡು ಕೇವಲ ಒಂದು ಅರ್ಜಿ ಸಲ್ಲಿಸಿ ಸ್ಥಾಪಿಸಬಹುದು. ಆ ಮೇಲೆ ಸರ್ಕಾರದಿಂದ ಅನುಮತಿ ಪಡೆಯಬಹುದು’ ಎಂದು ಅವರು ಹೇಳಿದರು.

‘ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳನ್ನು ಒಂದೆಡೆ ಅನುಸಂಧಾನಗೊಳಿಸಲಾಗಿದ್ದು, ಏಕಗವಾಕ್ಷಿ ಮೂಲಕ ಎಲ್ಲ ಬಗೆಯ ಅನುಮತಿಗಳನ್ನು ಯಾವುದೇ ಅಡ್ಡಿ- ಆತಂಕವಿಲ್ಲದೆ ಪಡೆದುಕೊಳ್ಳಬಹುದು. ಗುಜರಾತ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಇಂಥ ವ್ಯವಸ್ಥೆ ಇದೆ. ಆದರೆ, ಅಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಮಾತ್ರ ಈ ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳಿಗೂ ಈ ಅವಕಾಶ ಕಲ್ಪಿಸಲಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೋವಿಡ್ ನಿಯಂತ್ರಣ: ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್-19 ಸೋಂಕು ನಿಯಂತ್ರಣದಲ್ಲಿದೆ ಎಂದ ಉಪ ಮುಖ್ಯಮಂತ್ರಿ, ‘ಸರ್ಕಾರದ ವಶದಲ್ಲಿರುವ ಒಟ್ಟು ಕೋವಿಡ್ ಹಾಸಿಗೆಗಳ ಪೈಕಿ ಇನ್ನೂ ಶೇ 30ರಷ್ಟು ಖಾಲಿ ಇವೆ. ಈಗ ಬೇಡಿಕೆಗಿಂತ ನಮ್ಮಲ್ಲಿರುವ ಸೌಲಭ್ಯಗಳೇ ಹೆಚ್ಚಾಗಿವೆ. ಹೀಗಾಗಿ ಯಾವುದೇ ಆತಂಕವಿಲ್ಲ. ಜನರು ಧೈರ್ಯವಾಗಿರಬಹುದು’ ಎಂದು ಅವರು ತಿಳಿಸಿದರು.

ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಅನಿಲ್ ಶೆಟ್ಟಿ ಮತ್ತು ಕೀರ್ತಿನಾರಾಯಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು