ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲಕ್ಕೆ ಭೂಮಿ ಹರಾಜು

ಒತ್ತುವರಿ ತೆರವಿನ 79 ಎಕರೆ ಮಾರಾಟಕ್ಕಿಟ್ಟ ಸರ್ಕಾರ
Last Updated 1 ಸೆಪ್ಟೆಂಬರ್ 2020, 21:03 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ರಾಜ್ಯ ಸರ್ಕಾರ, ಒತ್ತುವರಿ ತೆರವುಗೊಳಿಸಿದ ಜಮೀನು ಹರಾಜು ಹಾಕಿಸಂಪನ್ಮೂಲ ಕ್ರೋಡೀಕರಿಸಲು ನಿರ್ಧರಿಸಿದೆ.

ಆರಂಭಿಕ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 79 ಎಕರೆ 4 ಗುಂಟೆ ಗೋಮಾಳ ಭೂಮಿ ಹರಾಜು ಮಾಡಲು ಗುರುತಿಸಲಾಗಿದೆ.

ಒತ್ತುವರಿ ತೆರವುಗೊಳಿಸಿರುವ ಜಮೀನು ಹರಾಜು ಹಾಕಿ, ಆರ್ಥಿಕ ಸಂಕಷ್ಟದಿಂದ ಪಾರಾಗುವ ಬಗೆ ಹುಡುಕಿ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದೆ. ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಡೀಕರಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವಿಡಿಯೊ ಸಂವಾದದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

‘ಹರಾಜು ಹಾಕಲು ಲಭ್ಯವಿರುವ ಜಮೀನಿನ ಪಟ್ಟಿಯನ್ನು ಕಳುಹಿಸುವಂತೆ ನಗರ ಜಿಲ್ಲೆಯ ಐದು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿತ್ತು. ಆರಂಭಿಕ ಹಂತದಲ್ಲಿ 107 ಎಕರೆ ಜಾಗ ಹರಾಜಿಗೆ ಲಭ್ಯ ಇದೆ ಎಂದು ತಹಶೀಲ್ದಾರ್‌ಗಳು ವರದಿ ಸಲ್ಲಿಸಿದ್ದರು. ಇದರಲ್ಲಿ ಅನೇಕ ಜಮೀನು ವಿವಾದದಿಂದ ಕೂಡಿವೆ. ಅಂಥವನ್ನು ಕೈಬಿಟ್ಟು ಪರಿಷ್ಕೃತ ‍ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು.

‘ಈ ಜಮೀನು ಇ–ಹರಾಜು ಹಾಕಲಾಗುವುದು. ನಗರ ಜಿಲ್ಲೆಯಲ್ಲಿ ಒಂದು ಎಕರೆಗೆ ಮಾರ್ಗಸೂಚಿ ದರ ಸರಾಸರಿ ₹2 ಕೋಟಿ ಇದೆ. ಹರಾಜಿನಿಂದ ಅಂದಾಜು ₹300 ಕೋಟಿ ಸಂಗ್ರಹವಾಗಬಹುದು’ ಎಂದು ಅವರು ಹೇಳಿದರು.

‘ವಿ.ಶಂಕರ್ ಅವರು ನಗರ ಜಿಲ್ಲಾಧಿಕಾರಿಯಾಗಿದ್ದಾಗ 16 ಸಾವಿರ ಎಕರೆ ಒತ್ತುವರಿ ತೆರವುಗೊಳಿಸಲಾಗಿತ್ತು. ಇದರಲ್ಲಿ 1,200 ಎಕರೆಯನ್ನು ‘ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ’ ಅನುಷ್ಠಾನಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಜಾಗ ಹರಾಜು ಹಾಕಲು ಪಟ್ಟಿ ಸಿದ್ಧಪಡಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಬಿ-ಖರಾಬು ಹರಾಜಿಗೂ ಸಿದ್ಧತೆ

ಮಹದೇವಪುರ ವಲಯದ ಬೆಂಡಿಗಾನಹಳ್ಳಿ, ಭಟ್ಟಹಳ್ಳಿ, ಕೌದೇನಹಳ್ಳಿ, ಮಹದೇವಪುರ, ಚಳ್ಳಕೆರೆ ಗ್ರಾಮಗಳಲ್ಲಿ 61 ಎಕರೆ 21 ಗುಂಟೆ ಬಿ–ಖರಾಬು ಜಾಗ ಇದೆ. ಇದರಲ್ಲಿ 31 ಎಕರೆ 13 ಗುಂಟೆ ಒತ್ತುವರಿಯಾಗಿದೆ. ಈ ಜಾಗ ಪರಿಶೀಲನೆ ನಡೆಸಿ ಮಾರಾಟ ಮಾಡಲು ಹಾಗೂ ಒತ್ತುವರಿ ತೆರವುಗೊಳಿಸಲು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಸ್ಮಶಾನ, ರಸ್ತೆಗಳು ಇದ್ದು, ಒತ್ತುವರಿ ತೆರವಿಗೆ 2 ಎಕರೆ ಸಿಗಬಹುದು ಎಂದು ಅಂದಾಜಿಸಿದ್ದಾರೆ. ‘ಮುಂದಿನ ಸಭೆಯಲ್ಲಿ ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಲಾಗುವುದು’ ಎಂದು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ (ಜಾರಿ ದಳ) ಪ್ರಜ್ಞಾ ಅಮ್ಮೆಂಬಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT