ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ: ದಾಖಲೆ ಬರೆದ ಕಂದಾಯ ಇಲಾಖೆ

52,072 ಬಂಜಾರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಮೋದಿ
Last Updated 19 ಜನವರಿ 2023, 23:07 IST
ಅಕ್ಷರ ಗಾತ್ರ

ಮಳಖೇಡ (ಕಲಬುರಗಿ ಜಿಲ್ಲೆ): ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು 52,072 ಬಂಜಾರ ಸಮುದಾಯದ ಕುಟುಂಬಗಳಿಗೆ ಏಕಕಾಲಕ್ಕೆ ನಿವೇಶನ ಹಕ್ಕುಪತ್ರ ವಿತರಿಸುವ ಮೂಲಕ ಕಂದಾಯ ಇಲಾಖೆಯ ಹೆಸರಿನಲ್ಲಿ ದಾಖಲೆ ಬರೆದರು.

ಇದಕ್ಕೆಂದೇ ಮೂರು ತಿಂಗಳಿನಿಂದ ಇಲಾಖೆ ಅಧಿಕಾರಿಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ತಾಂಡಾ ನಿವಾಸಿಗಳ ಮಾಹಿತಿ ಸಂಗ್ರಹಿಸಿದ್ದರು. ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ಸ್‌ ಸಂಸ್ಥೆಯ ಕರ್ನಾಟಕ ಘಟಕದ ಉಪಾಧ್ಯಕ್ಷೆ ವಸಂತ ಕವಿತಾ ಅವರು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಪ್ರಮಾಣಪತ್ರ ನೀಡಿದರು.

ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಸಾಂಕೇತಿಕವಾಗಿ ಐದು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಪ್ರಧಾನಿ ಮೋದಿ, ‘ಬಂಜಾರ ಸಮುದಾಯದವರು ವಾಸಿಸುವ ಮನೆಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂಬ ಮೂರು ದಶಕಗಳ ಬೇಡಿಕೆಯನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ಮಾಡಿದ್ದವು. ಅವರಿಗೆ ಭದ್ರ ನೆಲೆ ಒದಗಿಸಲು ನಮ್ಮ ಸರ್ಕಾರವೇ ಬರಬೇಕಾಯಿತು’ ಎಂದರು.

‘ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ತಾಂಡಾಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೌಚಾಲಯವುಳ್ಳ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮನೆಗಳಿಗೆ ನಳದ ಸಂಪರ್ಕ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ದೆಹಲಿಯಲ್ಲಿ ನಿಮ್ಮ ಮಗ ಇದ್ದಾನೆ ಎಂದು ಭಾವಿಸಿ ನೆಮ್ಮದಿಯಿಂದ ಇರಿ’ ಎಂದು ಹೇಳಿದರು.

‘1993ರಲ್ಲೇ ತಾಂಡಾ, ಹಾಡಿ, ಹಟ್ಟಿಗಳು ಸೇರಿ ಬುಡಕಟ್ಟು, ಅಲೆಮಾರಿ ಸಮುದಾಯಗಳು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವ ಇತ್ತು. ಆದರೆ, ಈವರೆಗೆ ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಎಲ್ಲ ತಾಂಡಾ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಅವರು ಘೋಷಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಲಂಬಾಣಿ ಸಮುದಾಯದ ಯುವಜನರಿಗೆ ಉಚಿತ ತರಬೇತಿ ಕೊಡಿಸಲಾಗುವುದು. ಮುದ್ರಾ ಯೋಜನೆಯಡಿ ₹ 5 ಲಕ್ಷ ಸಾಲ ಸೌಲಭ್ಯ ಒದಗಿಸಲಾಗುವುದು’ ಎಂದರು.

‘ಮತಬ್ಯಾಂಕ್‌ ರಾಜಕಾರಣ’
ಇದಕ್ಕೂ ಮುನ್ನ ಯಾದಗಿರಿ ಜಿಲ್ಲೆಯ ಕೊಡೇಕಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ‘ಈ ಹಿಂದಿನ ಸರ್ಕಾರಗಳು ಜಾತಿ, ಧರ್ಮದ ಹೆಸರಿನಲ್ಲಿ ಮತ ಬ್ಯಾಂಕ್‌ ರಾಜಕಾರಣ ಮಾಡಿದವೇ ಹೊರತು ಪ್ರದೇಶದ ಅಭಿವೃದ್ಧಿ ಮತ್ತು ಜನರ ಏಳ್ಗೆಗೆ ಆದ್ಯತೆ ನೀಡಲಿಲ್ಲ. ಆದರೆ, ನಮ್ಮ ಡಬಲ್ ಎಂಜಿನ್ ಸರ್ಕಾರಕ್ಕೆ ಪ್ರದೇಶದ ಅಭಿವೃದ್ಧಿ ಮತ್ತು ಜನರ ಏಳ್ಗೆಯೇ ಮುಖ್ಯ. ಅಭಿವೃದ್ಧಿಯೇ ಪ್ರಧಾನವಾಗಿದೆ’ ಎಂದರು.

*

ಪರಿಶಿಷ್ಟರ ಮನೆಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಒದಗಿಸಲಾಗಿದೆ. ಪರಿಶಿಷ್ಟರ ಶಿಕ್ಷಣಕ್ಕೆ 100 ಅಂಬೇಡ್ಕರ್ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ರಾಜ್ಯದ ಮೂರು ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಹಕ್ಕುಪತ್ರ ಪಡೆದ ಎಲ್ಲರಿಗೂ ಉಚಿತವಾಗಿ ಆಸ್ತಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
–ಆರ್. ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT