ಗುರುವಾರ , ಆಗಸ್ಟ್ 5, 2021
22 °C
ವೈಯಕ್ತಿಕ ಕೆಲಸಗಳ ಕಾರಣ ನೀಡಿದ ಶಾಸಕ

ನಾಯಕತ್ವ ಬದಲಾವಣೆ ಚರ್ಚೆ | ದೆಹಲಿಗೆ ಅರವಿಂದ ಬೆಲ್ಲದ್; ವರಿಷ್ಠರ ಭೇಟಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಶುಕ್ರವಾರ ತಡರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಗೆ ದೌಡಾಯಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೆಲ್ಲದ್ ಅವರ ದೆಹಲಿಯ ದಿಢೀರ್‌ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಬೆಲ್ಲದ್ ಅವರು ಸಚಿವ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಮೇ ಮೂರನೇ ವಾರ ದೆಹಲಿಗೆ ಬಂದಿದ್ದರು. ಆಗ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಬೇಕೆಂಬ ಅವರ ಪ್ರಯತ್ನಗಳು ಫಲಿಸಿರಲಿಲ್ಲ ಎನ್ನಲಾಗಿತ್ತು.

ಇದೀಗ ಬೆಲ್ಲದ್ ಅವರೊಂದಿಗೆ ಯೋಗೇಶ್ವರ್ ಹಾಗೂ ಇತರ‌ ಕೆಲವು ಸಮಾನ‌ ಮನಸ್ಕ ಶಾಸಕರೂ ದೆಹಲಿಗೆ ಬಂದಿದ್ದಾರೆ ಎನ್ನಲಾಗಿದ್ದು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಾಗಿ ಮತ್ತೆ ವರಿಷ್ಠರ ಭೇಟಿಗೆ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಕ್ಷನಿಷ್ಠರಿಗೆ ಅನ್ಯಾಯವಾಗಿದೆ: ಶಾಸಕ ಅರವಿಂದ ಬೆಲ್ಲದ್

ಪಕ್ಷದ‌ ಉಸ್ತುವಾರಿ ಅರುಣ್ ಸಿಂಗ್ ಅವರು ಮುಂದಿನ‌ವಾರ ಬೆಂಗಳೂರಿಗೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದು, ಅದಕ್ಕೂ ಮೊದಲೇ ಕೆಲವು ಶಾಕಸರ ಗುಂಪು ಅವರಿಗೆ ದೂರು ಸಲ್ಲಿಸುವ ಸಾಧ್ಯತೆ‌ ಇದೆ ಎಂದು ಹೇಳಲಾಗಿದೆ.

ಆದರೆ, ವೈಯಕ್ತಿಕ ಕಾರಣದಿಂದ ದೆಹಲಿಗೆ ಬಂದಿದ್ದಾಗಿ 'ಪ್ರಜಾವಾಣಿ'ಗೆ ತಿಳಿಸಿರುವ‌ ಶಾಸಕ  ಬೆಲ್ಲದ್, ಯಾವುದೇ ಮುಖಂಡರನ್ನು ಭೇಟಿ ಮಾಡುವ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

ಆಗಾಗ‌ ವೈಯಕ್ತಿಕ ಕೆಲಸ- ಕಾರ್ಯಗಳಿಗಾಗಿ ದೆಹಲಿ ಸೇರಿದಂತೆ‌ ಉತ್ತರ ಭಾರತ ಪ್ರವಾಸಕ್ಕೆ ಬರುವುದಾಗಿ ಹೇಳಿರುವ ಅವರು, ಯಾವುದೇ ರಾಜಕೀಯ ಕಾರಣಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು