ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರ್ಬಲರ ಯೋಜನೆಗಳ ಮೇಲ್ವಿಚಾರಣೆ ಹೊಣೆ ನ್ಯಾಯಮೂರ್ತಿಗಳಿಗೆ’

Last Updated 8 ಜನವರಿ 2021, 17:18 IST
ಅಕ್ಷರ ಗಾತ್ರ

ಬೆಂಗಳೂರು: ಬಡವರು, ಅಸಂಘಟಿತ, ಸಂಘಟಿತ ಕಾರ್ಮಿಕರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಗೆ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದೆ.

ಈ ಸಂಬಂಧ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ರೂ‍‍ಪಿಸಿರುವ 11 ಯೋಜನೆಗಳ ಪೈಕಿ ರಾಜ್ಯ ಪ್ರಾಧಿಕಾರ 8 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅವುಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಮತ್ತು ಅಗತ್ಯಾನುಸಾರ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಪ್ರತಿ ಯೋಜನೆಗೆ ತಲಾ ಒಬ್ಬರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಗೆ ವಹಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ತಿಳಿಸಿದರು.

ಈ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಬಡತನ ನಿರ್ಮೂಲನೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ಅವರಿಗೆ ವಹಿಸಲಾಗಿದೆ’ ಎಂದರು.

‘ಅರೆಕಾಲಿಕ ಕಾನೂನು ಸ್ವಯಂ ಸೇವಕರ ಯೋಜನೆಗೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ಮಾನಸಿಕ ಅಸ್ವಸ್ಥರ ಯೋಜನೆಗಳಿಗೆ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಹಿರಿಯ ನಾಗರಿಕರ ಯೋಜನೆಗೆ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಗೇರಿ, ಮಾನವ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ಸಂತ್ರಸ್ತರ ಯೋಜನೆಗೆ ನ್ಯಾಯಮೂರ್ತಿ ಅಜಿತ್ ಗುಂಜಾಳ್, ಅಸಂಘಟಿತ ಕಾರ್ಮಿಕರಿಗೆ ಕಾನೂನು ಸೇವೆಗಳ ಯೋಜನೆಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಹಾಗೂ ಪ್ರಕೃತಿ ವಿಕೋಪ ಸಂತ್ರಸ್ತರ ಯೋಜನೆಗಳ ಜವಾಬ್ದಾರಿಯನ್ನು ನ್ಯಾಯಮೂರ್ತಿ ಕೆ.ಎನ್ ಕೇಶವನಾರಾಯಣ ಅವರಿಗೆ ವಹಿಸಲಾಗಿದೆ’ ಎಂದು ವಿವರಿಸಿದರು.

ಕೋವಿಡ್‌ ನಿರ್ವಹಣೆ ಮೇಲ್ವಿಚಾರಣೆ ನಡೆಸಲು ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ, ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ. ರಮೇಶ್ ಅವರು ಸಮಿತಿಯಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT