ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತರು ಒಗ್ಗಟ್ಟಾಗಿರಬೇಕು: ಶಾಸಕ ಬಿ.ಎಸ್. ಯಡಿಯೂರಪ್ಪ

ಶಾಸಕ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಶ್ರೀ ವೀರಭದ್ರೇಶ್ವರ ಪ್ರಶಸ್ತಿ’ ಪ್ರದಾನ
Last Updated 14 ಸೆಪ್ಟೆಂಬರ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: 'ವೀರಶೈವ ಲಿಂಗಾಯತ ಬಹಳ ದೊಡ್ಡ ಸಮಾಜ. ನಾವೆಲ್ಲಾ ಒಗ್ಗಟ್ಟಾಗಿ ಈ ನಾಡಿನ ಎಲ್ಲಾ ವರ್ಗದ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು. ಅವರೆಲ್ಲರ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು' ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ - 2021 ಕಾರ್ಯಕ್ರಮದಲ್ಲಿ ‘ಶ್ರೀ ವೀರಭದ್ರೇಶ್ವರ ಪ್ರಶಸ್ತಿ’ ಸ್ವೀಕರಿಸಿ ಮಂಗಳವಾರ ಮಾತನಾಡಿದರು.

‘ಭಗವಂತ ನಮಗೆ ಎಲ್ಲವನ್ನೂ ಕರುಣಿಸಿದ್ದಾನೆ. ಎಲ್ಲ ರೀತಿಯ ಬುದ್ಧಿ, ಶಕ್ತಿಗಳು ನಮಗಿವೆ. ಅದನ್ನು ಶೋಷಿತ ಹಾಗೂ ದಲಿತರ ಅಭಿವೃದ್ಧಿಗಾಗಿ ಮೀಸಲಿಡಬೇಕು. ಆಗ ಈ ಸಮಾಜದಲ್ಲಿ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.

’ಸಮಾಜದ ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು. ಸ್ವಾಭಿಮಾನಿ ಗಳಾಗಿ ಬದುಕಬೇಕು. ಗುಡಿ ಕೈಗಾರಿಕೆ ಗಳನ್ನು ತೆರೆದು ಒಂದಷ್ಟು ಮಂದಿಗೆ ಕೆಲಸ ಕೊಡುವಂತಾಗಬೇಕು. ಇದಕ್ಕೆ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಕೊಡಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.

‘ವೀರಭದ್ರ ಶಿವ ಸಂಸ್ಕೃತಿಯ ಸಂಕೇತ‌. ಅವರ ಹೆಸರಿನಲ್ಲಿ ನೀಡುತ್ತಿರುವ ಮೊದಲ ಪ್ರಶಸ್ತಿ ನನಗೆ ಸಿಕ್ಕಿರುವುದು ಪೂರ್ವಜನ್ಮದ ಫಲ. ಈ ಪ್ರಶಸ್ತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಣ್ಯರಿಗೆ ಸಿಗಲಿ. ವೀರಭದ್ರನ ಸ್ಮರಣೆಯಿಂದ ದುಷ್ಟ ಶಕ್ತಿಗಳು ದೂರವಾಗಲಿ’ ಎಂದು ಅವರು ಆಶಿಸಿದರು.

‘ಮೋದಿ ನೇತೃತ್ವದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾ ಗಿವೆ. ನನ್ನ ಅವಧಿಯಲ್ಲಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಬ್ಬರಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಸಂತೋಷದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಮ್ಮೆಲ್ಲರ ಅಪೇಕ್ಷೆಯಂತೆ ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ ಆಗಿದ್ದಾರೆ. ನನ್ನಂತೆ ಅವರಿಗೂ ಎಲ್ಲಾ ಸಹಕಾರ ನೀಡಬೇಕು. ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ‘ಶಿವ ಸಂಸ್ಕೃತಿಯ ಮೂಲ ವ್ಯಕ್ತಿ ವೀರಭದ್ರ. ವೀರಶೈವರಷ್ಟೇ ಅಲ್ಲದೆ ಇತರ ಸಮುದಾಯದವರೂ ವೀರಭದ್ರೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ. ಸಹಸ್ರಾರು ಶಾಸನಗಳಲ್ಲಿ ವೀರಭದ್ರ ಸ್ವಾಮಿಯ ಮಹಿಮೆಯನ್ನು ಕಾಣಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT