ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ‘ಕೈ’ಗೆ ವರ, ಬಿಜೆಪಿಗೆ ಮುಖಭಂಗ

ಬಿಎಸ್‌ವೈ ತವರು ಜಿಲ್ಲೆಯಲ್ಲೂ ಕೈ ಮೇಲುಗೈ
Last Updated 30 ಏಪ್ರಿಲ್ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.

ಒಟ್ಟು 10 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ 6, ಜೆಡಿಎಸ್‌ 2 ಮತ್ತು ಬಿಜೆಪಿ 1 ರಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿವೆ. ಬಳ್ಳಾರಿ ಮಹಾನಗರ ಪಾಲಿಕೆಯನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ. ಆದರೆ, ಬೀದರ್‌ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ.

ಕೋವಿಡ್‌ ಎರಡನೇ ಅಲೆಯ ಮಧ್ಯೆಯೂ ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದ್ದವು. ಕಾಂಗ್ರೆಸ್‌ ಅತ್ಯಧಿಕ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿರುವುದರಿಂದ ಅದರ ವಿಶ್ವಾಸ ಇಮ್ಮಡಿಯಾಗಿದೆ. ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಹೀನವಾಗಿದೆ ಎಂಬ ವಿಶ್ಲೇಷಣೆಗೆ ಶುಕ್ರವಾರ ಪ್ರಕಟಗೊಂಡ ಫಲಿತಾಂಶ ಇಂಬು ಕೊಟ್ಟಿದೆ.

ಜೆಡಿಎಸ್‌ ತನ್ನ ಭದ್ರಕೋಟೆಯಾದ ಚನ್ನಪಟ್ಟಣ ನಗರಸಭೆ ಮತ್ತು ಇತ್ತೀಚಿನ ವರ್ಷಗಳಲ್ಲೇ ಮೊದಲ ಬಾರಿಗೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪುರಸಭೆಗಳಲ್ಲಿ ಗೆಲುವು ಸಾಧಿಸಿದೆ.

ಮಡಿಕೇರಿ ನಗರಸಭೆ ಅಧಿಕಾರ ಹಿಡಿಯುವಲ್ಲಿ ಮಾತ್ರ ಬಿಜೆಪಿ ಯಶಸ್ಸು ಸಾಧಿಸಿದೆ. ಇಲ್ಲಿ 5 ಸ್ಥಾನಗಳನ್ನು ಗೆದ್ದಿರುವ ಎಸ್‌ಡಿಪಿಐ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ತಲಾ ಒಂದು ಸ್ಥಾನಗಳಿಗೆ ಕುಸಿದಿವೆ. ಬೀದರ್‌ ನಗರಸಭೆಯಲ್ಲಿ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂನ ಇಬ್ಬರು, ಆಮ್‌ ಆದ್ಮಿ ಪಕ್ಷದ ಒಬ್ಬರು ಗೆಲುವು ಸಾಧಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆಯ ಭದ್ರಾವತಿ ನಗರಸಭೆಗೆ ಚುನಾವಣೆ ಘೋಷಣೆಗೂ ಮೊದಲು ನಡೆದಿದ್ದ ಕಬಡ್ಡಿ ಪಂದ್ಯಾವಳಿಯ ಗಲಾಟೆ ರಾಜಕೀಯವಾಗಿ ಸಂಚಲನ ಸೃಷ್ಟಿಸಿತ್ತು. ಇದರಿಂದ ಬಿಜೆಪಿಗೆ ಅನುಕೂಲ ಆಗಬಹುದು ಎಂದು ಭಾವಿಸಲಾಗಿತ್ತು.

ಆದರೆ, ಕಾಂಗ್ರೆಸ್‌ ಶಾಸಕ ಸಂಗಮೇಶ್ವರ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಜಿಲ್ಲೆಯಲ್ಲಿ ಆಪಕ್ಷ ದೊಡ್ಡ ಆಂದೋಲನವನ್ನೇ ನಡೆಸಿತ್ತು.

ಇದು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದಂತಾಗಿದೆ. ಬಿಜೆಪಿ ಶಾಸಕರಿರುವ ತೀರ್ಥಹಳ್ಳಿಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರ ಪುತ್ರ ಶ್ರವಣ್ ಕುಮಾರ್‌ ರೆಡ್ಡಿ ಸೋಲು ಅನುಭವಿಸಿದ್ದಾರೆ.

ರೆಡ್ಡಿ ಸಹೋದರರ ಪ್ರಭಾವವಿರುವ ಜಿಲ್ಲೆಯಲ್ಲಿ ಒಮ್ಮೆ ಮಾತ್ರ ಅಧಿಕಾರ ಹಿಡಿಯಲು ಯಶಸ್ವಿಯಾಗಿತ್ತು. ಘಟಾನುಘಟಿ ನಾಯಕರುಗಳಿದ್ದರೂ ಇಲ್ಲಿ ಬೇರು ಬಿಡಲು ಕಮಲ ಪಕ್ಷಕ್ಕೆ ಸಾಧ್ಯವಾಗಿಲ್ಲ.

**

ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಕೊರೊನಾ ವೇಳೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದರಿಂದ ತಕ್ಕ ಪಾಠ ಕಲಿಸಿದ್ದಾರೆ.
-ಸಿದ್ಧರಾಮಯ್ಯ, ವಿರೋಧ ಪಕ್ಷದ ನಾಯಕ

**

ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರ, ಅಪಪ್ರಚಾರಗಳ ನಡುವೆಯೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನತೆ ಪಕ್ಷದ ಕೈ ಹಿಡಿದಿದ್ದಾರೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT