ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆ: ಮುಖ್ಯಮಂತ್ರಿಯಿಂದ ಅಂತಿಮ ತೀರ್ಮಾನ-ಬೊಮ್ಮಾಯಿ

Last Updated 29 ಮೇ 2021, 8:05 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಜೂನ್‌ 7ರ ನಂತರ ಲಾಕ್‌ಡೌನ್‌ ವಿಸ್ತರಿಸಬೇಕೇ, ಬೇಡವೇ ಎಂಬ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಕೋವಿಡ್‌ ನಿಯಂತ್ರಿಸಲು ಜೂನ್ 30ರವರೆಗೆ ಬಿಗಿ ಕ್ರಮಗಳು ಇರಬೇಕು ಎಂದು ಹೇಳಿದೆ. ಇದನ್ನು ಯಾವ ರೀತಿ ಜಾರಿ ಮಾಡಬೇಕು ಎಂಬ ಕುರಿತು ಸಚಿವರ ಸಭೆಯಲ್ಲಿ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇನ್ನೂ ಕಡಿಮೆ ಆಗಿಲ್ಲ. ಅದು ಶೇ 10ಕ್ಕಿಂತ ಕಡಿಮೆ ಆಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕು ಪ್ರಮಾಣ ಮತ್ತು ಸಾವುಗಳ ಸಂಖ್ಯೆ ನಿಯಂತ್ರಣಕ್ಕೆ ಬರಬೇಕು. ಆಗ ಮಾತ್ರ ಕೋವಿಡ್ ಹತೋಟಿಗೆ ಬರಲು ಸಾಧ್ಯ. ಆಗ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ’ ಎಂದು ಅವರು ತಿಳಿಸಿದರು.

‘ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ₹ 11 ಸಾವಿರ ಕೋಟಿ ಜಿಎಸ್‌ಟಿ ಪರಿಹಾರವನ್ನು ನೀಡುವಂತೆ ಒತ್ತಾಯ ಮಾಡಲಾಗಿದೆ. ಈ ವರ್ಷ ಮತ್ತೆ ಕೋವಿಡ್ ಬಂದಿದೆ. ಆರು ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಚೇತರಿಸಿಕೊಂಡಿತ್ತು. ಆದರೆ, ಈಗ ಮತ್ತೆ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಈ ಬಾರಿ 2 - 3 ತಿಂಗಳು ಜಿಎಸ್‌ಟಿ ಸಂಗ್ರಹ ಕಡಿಮೆಯಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಕಡಿಮೆಯಾಗುವ ಜಿಎಸ್‌ಟಿ ಪರಿಹಾರವನ್ನು ತುಂಬಿಕೊಡುವಂತೆ ಎಲ್ಲ ರಾಜ್ಯಗಳು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯ ಮಾಡಿವೆ’ ಎಂದರು.

‘ಕರ್ನಾಟಕದಿಂದ ಸಭೆಯಲ್ಲಿ ಭಾಗವಹಿಸಿದ್ದ ನಾನು ಕೂಡ ಇದೇ ಒತ್ತಾಯ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಜಿಎಸ್‌ಟಿಯಿಂದ ಎಷ್ಟು ಪರಿಹಾರ ಕೊಡಬೇಕು, ಸಾಲ ಪಡೆಯಲು ಅನುಮತಿ ನೀಡಬೇಕೇ ಎಂಬುವುದನ್ನು ಹೊರತುಪಡಿಸಿ ಉಳಿದ ಪರಿಹಾರ ಹಣವನ್ನು ಯಾವ ರೂಪದಲ್ಲಿ ನೀಡಲು ಸಾಧ್ಯ ಎಂಬುದರ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

ತನಿಖೆ ಮುಂದುವರಿದೆ: ‘ಬಾಂಗ್ಲಾ ದೇಶದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಸತ್ಯ ಹೊರ ಬರಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT