ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾಜ್ಯದಲ್ಲಿ 14 ದಿನ ಲಾಕ್‌ಡೌನ್‌: ವಾಹನಗಳು ರಸ್ತೆಗೆ ಇಳಿಯುವಂತಿಲ್ಲ

ಅಗತ್ಯ ವಸ್ತುಗಳ ಖರೀದಿಗೆ ನಾಲ್ಕು ತಾಸು
Last Updated 9 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಸೋಮವಾರದಿಂದ 14 ದಿನಗಳ ಕಠಿಣ ಲಾಕ್‌ಡೌನ್‌ ಜಾರಿಗೆ ಬರಲಿದೆ. ಅನುಮತಿ ನೀಡಿರುವ ಚಟುವಟಿಕೆಗಳು ಮತ್ತು ತುರ್ತು ಕಾರಣಗಳನ್ನು ಹೊರತುಪಡಿಸಿ ಯಾರೊಬ್ಬರೂ ರಸ್ತೆಗೆ ಇಳಿಯಲು ಅವಕಾಶವೇ ಇಲ್ಲ.

ಜನರ ಓಡಾಟವನ್ನು ತುಸು ನಿಯಂತ್ರಿಸುವ ಸಾಮಾನ್ಯ ನಿರ್ಬಂಧಗಳಿಂದ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ 14 ದಿನಗಳ ಕಾಲ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಜಾರಿಗೆ ಮೇ 7ರಂದೇ ಆದೇಶ ಹೊರಡಿಸಲಾಗಿದೆ. ಈ ಬಾರಿ ಸ್ಥಳೀಯವಾಗಿಯೂ ಜನರ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸಿದ್ಧತೆಗಳು ನಡೆದಿವೆ.

ಸೋಮವಾರ ಬೆಳಿಗ್ಗೆ 6ರಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೂ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ, ಅಂತರರಾಜ್ಯ ಪ್ರಯಾಣಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವವರನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶ ಇಲ್ಲ.

ಈ ಬಾರಿ ಹಿಂದೆಂದಿಗಿಂತಲೂ ಕಠಿಣವಾದ ರೀತಿಯಲ್ಲಿ ಲಾಕ್‌ಡೌನ್‌ ಜಾರಿಗೆ ಪೂರಕ ತಯಾರಿ ನಡೆದಿದೆ. ಭಾನುವಾರವೇ ಪೊಲೀಸರು ತಾಲೀಮು ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಸಡಿಲಿಕೆಯ ಅವಧಿಯ ಬಳಿಕ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿ, ವಾಹನಗಳನ್ನು ವಶಕ್ಕೆ ಪಡೆದರು.

ಅನುಮತಿ ನೀಡಿದ ಚಟುವಟಿಕೆಗಳ ಹೊರತಾಗಿ ರಸ್ತೆಗೆ ಇಳಿಯುವವರ ವಾಹನಗಳನ್ನು ವಶಕ್ಕೆ ಪಡೆದು, 14 ದಿನಗಳ ಕಾಲ ಇರಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೂ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಖರೀದಿಗೆ ನಾಲ್ಕು ತಾಸು: ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅವಕಾಶ ಇದೆ. ಈ ಅವಧಿಯಲ್ಲೂ ಜನರು ವಾಹನಗಳನ್ನು ಬಳಸಲು ಅವಕಾಶ ವಿಲ್ಲ. ತಮ್ಮ ಮನೆಯ ಸಮೀಪದ ಅಂಗಡಿಗಳಿಗೆ ಕಾಲ್ನಡಿಗೆಯಲ್ಲೇ ಹೋಗಿ ಖರೀದಿಸಬೇಕು.

ಬೆಳಿಗ್ಗೆ ಈ ನಾಲ್ಕು ಗಂಟೆಗಳ ಅವಧಿಯಲ್ಲಿ ಹಾಲು, ಹಣ್ಣು, ತರಕಾರಿ, ಮೀನು, ಮಾಂಸ, ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶವಿದೆ. ಮದ್ಯದಂಗಡಿಗಳಲ್ಲೂ ಪಾರ್ಸೆಲ್‌ ಸೇವೆ ಲಭ್ಯವಿರಲಿದೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು, ತುರ್ತುಸೇವೆಗೆ ಸಂಬಂಧಿ ಸಿದ ಕೆಲವು ಕಚೇರಿಗಳು ಮಾತ್ರ ಇಡೀ ದಿನ ತೆರೆದಿರುತ್ತವೆ. ತಳ್ಳುಗಾಡಿಗಳಲ್ಲಿ ಮತ್ತು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಹಣ್ಣು, ತರಕಾರಿಗಳ ಮಾರಾಟ, ನಂದಿನಿ ಹಾಲಿನ ಮಳಿಗೆಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ವಹಿವಾಟು ನಡೆಸಬಹುದು.

ಚೆಕ್‌ಪೋಸ್ಟ್‌ ನಿರ್ಮಾಣ: ರಾಜ್ಯದ ಎಲ್ಲ ಅಂತರ ಜಿಲ್ಲಾ ಗಡಿ ಪ್ರದೇಶಗಳು, ಅಂತರ ರಾಜ್ಯ ಗಡಿಗಳಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖೆಗಳು ಜಂಟಿ ಯಾಗಿ ಚೆಕ್‌ಪೋಸ್ಟ್‌ ತೆರೆದಿವೆ.

ನಗರ ಪ್ರದೇಶಗಳು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ನೂರಾರು ಸಂಖ್ಯೆಯ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು, ವಾಹನ ಗಳ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರ ಸೂಚಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿಚೀಟಿ ತೋರಿಸಿ ಕಚೇರಿಗಳಿಗೆ ಹೋಗಬಹುದು.

ಹಣ್ಣು– ತರಕಾರಿ ವಾಹನ ಬಳಕೆಗೆ ಅವಕಾಶ: ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುವವರು ಬೆಳಿಗ್ಗೆ ಸಗಟು ಮಾರುಕಟ್ಟೆಗೆ ಹೋಗಿ, ತರಕಾರಿ ಖರೀದಿಸಿ ತರಲು ವಾಹನ ಬಳಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಆದರೆ, ಮಾರಾಟಗಾರರು ಬೆಳಿಗ್ಗಿನ ಅವಧಿಯಲ್ಲಿ ಸಗಟು ಮಾರುಕಟ್ಟೆಗೆ ಹೋಗಿ ಬರಲು ವಾಹನ ಬಳಸಬಹುದು ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಮಾರುವವರು ಸಗಟು ಮಾರುಕಟ್ಟೆಗಳಿಗೆ ಹೋಗಿ ಖರೀದಿಸಿ ತರಲು ವಾಹನ ಬಳಸಬಹುದು. ಆದರೆ, ಬೀದಿಗಳಲ್ಲಿ ಮಾರಾಟಕ್ಕೆ ವಾಹನಗಳನ್ನು ಬಳಸುವಂತಿಲ್ಲ’ ಎಂದು ಹೇಳಿದರು.

ಮುಗಿಯದ ಗೊಂದಲ: ಔಷಧಿ, ವೈದ್ಯಕೀಯ ಪರಿಕರಗಳು, ಆಸ್ಪತ್ರೆಗಳಲ್ಲಿ ಬಳಸುವ ಕೆಲವು ವಸ್ತುಗಳು, ಆಮ್ಲಜನಕ ಉತ್ಪಾದನೆ, ಆಹಾರ ಮತ್ತಿತರ ಅಗತ್ಯ ವಸ್ತುಗಳು, ಪೆಟ್ರೋಲಿಯಂ ಶುದ್ಧೀಕರಣ ಸೇರಿದಂತೆ ಕೆಲವು ಕೈಗಾರಿಕೆಗಳು ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಕಾರ್ಮಿಕರ ಪ್ರಯಾಣಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ.

ಕಾರ್ಮಿಕರು ಖಾಸಗಿ ವಾಹನ ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಕೆಲವೆಡೆ ಕಂಪನಿಗಳ ವಾಹನ ಬಳಕೆಗೆ, ಅನಿವಾರ್ಯವಾದರೆ ಕಾರ್ಮಿಕರ ಸ್ವಂತ ವಾಹನ ಬಳಕೆಗೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ. ಕೆಲವೆಡೆ ಅಂತಹ ಕ್ರಮ ಕೈಗೊಳ್ಳದೇ ಇರುವುದರಿಂದ ಉದ್ದಿಮೆಗಳ ಪ್ರತಿನಿಧಿಗಳು ಮತ್ತು ಕಾರ್ಮಿಕರು ಗೊಂದಲದಲ್ಲೇ ಇದ್ದಾರೆ.

ಯಾವುದಕ್ಕೆಲ್ಲ ಅವಕಾಶ
*ಆಹಾರ ಸಂಸ್ಕರಣಾ ಘಟಕಗಳು, ಬ್ಯಾಂಕ್‌, ವಿಮಾ ಕಚೇರಿಗಳು, ಎಟಿಎಂಗಳು, ದೂರಸಂಪರ್ಕ, ಇಂಟರ್‌ನೆಟ್‌ ಸೇವೆ ನೀಡುವವರು,

*ಇ–ಕಾರ್ಮಸ್‌ನವರು ಮನೆಗಳಿಗೆ ವಸ್ತುಗಳನ್ನು ತಲುಪಿಸಲು ಅವಕಾಶ

* ಕೋಲ್ಡ್‌ ಸ್ಟೋರೇಜ್‌, ಗೋದಾಮು ಸೇವೆಗಳು

*ವಿಮಾನ ಸಂಚಾರ ಮತ್ತು ರೈಲಿನ ಕಾರ್ಯಾಚರಣೆ ಇದೆ. ಇದರ ಮೂಲಕ ಬಂದವರು ಟಿಕೆಟ್‌ ತೋರಿಸಿ, ತಮ್ಮ ಮನೆಗಳಿಗೆ ತಾವೇ ಮಾಡಿಕೊಂಡ ಖಾಸಗಿ ವಾಹನ, ಆಟೋ, ಕ್ಯಾಬ್‌ ಮೂಲಕ ಹೋಗಬಹುದು

* ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಬಹುದು.

*ಕೋವಿಡ್ ನಿಯಮ ಪಾಲಿಸಿ ನಿರ್ಮಾಣ ಕಾಮಗಾರಿಗಳನ್ನು ನಡೆಸಬಹುದು. ಕಾರ್ಮಿಕರಿಗೆ ವಾಸ್ತವ್ಯಕ್ಕೆ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಬಹುದು.

* ಮದುವೆಗಳಿಗೆ ಅವಕಾಶ ಇದ್ದು, 50 ಜನ ಮೀರುವಂತಿಲ್ಲ.

* ಅಂತ್ಯಕ್ರಿಯೆಗೆ 5 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

* ಆಸ್ಪತ್ರೆಗಳು, ಆಯುಷ್ ಮತ್ತು ಪಶು ಆಸ್ಪತ್ರೆಗಳು, ಕ್ಲಿನಿಕ್‌ಗಳು, ಔಷಧದ ಅಂಗಡಿಗಳು, ಲ್ಯಾಬ್‌ಗಳು, ಜನೌಷಧಿ ಕೇಂದ್ರಗಳು, ರಕ್ತ ನಿಧಿಗಳು

* ಕೃಷಿ ಚಟುವಟಿಕೆಗಳು

* ಅಂಗವಿಕಲರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರ ಆರೈಕೆ ವ್ಯವಸ್ಥೆ

ಏನೆಲ್ಲ ಇರುವುದಿಲ್ಲ

* ಮೆಟ್ರೊ ರೈಲು ಸೇವೆ

* ತುರ್ತು ಸಂದರ್ಭ ಹೊರತುಪಡಿಸಿ ಟ್ಯಾಕ್ಸಿ, ಕ್ಯಾಬ್‌, ಆಟೋಗಳ ಸಂಚಾರಕ್ಕೆ ಅವಕಾಶವಿಲ್ಲ.

* ಶಾಲಾ–ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳು ನಡೆಯುವಂತಿಲ್ಲ. ಆನ್‌ಲೈನ್ ತರಗತಿಗಳಿಗಷ್ಟೇ ಅವಕಾಶ

* ಹೊಟೇಲ್‌, ರೆಸ್ಟೋರೆಂಟ್‌ ಮತ್ತು ಆತಿಥ್ಯ ಸೇವೆಗಳು. (ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ ಒಯ್ಯಬಹುದು)

* ಸಿನಿಮಾ ಹಾಲ್‌, ಶಾಪಿಂಗ್ ಮಾಲ್‌, ಜಿಮ್ನಾಷಿಯಂ, ಕ್ರೀಡಾ ಕಾಂಪ್ಲೆಕ್ಸ್‌, ಈಜುಕೊಳ

* ಸಾಮಾಜಿಕ, ರಾಜಕೀಯ, ಧಾರ್ಮಿಕ, ಮನರಂಜನೆಗಾಗಿ ಜನರನ್ನು ಸೇರಿಸುವುದು ನಿಷೇಧ.

ಕಾರ್ಯ ನಿರ್ವಹಿಸುವ ಸರ್ಕಾರಿ ಕಚೇರಿಗಳು

* ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್‌, ಹೋಮ್‌ ಗಾರ್ಡ್‌, ಅಗ್ನಿಶಾಮಕ,ಕಂದಾಯ ವಿದ್ಯುತ್‌, ನೀರು, ನೈರ್ಮಲ್ಯ

* ಬಿಬಿಎಂಪಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT