ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರ ವಿರುದ್ಧ ಸಮರಕ್ಕೆ ಲೋಕಾಯುಕ್ತ ಅಣಿ

ದೂರು ಕೊಟ್ಟರೆ ಬಳಕೆಯಾಗಲಿದೆ ‘ದಂಡಾಸ್ತ್ರ’ l ಹೈಕೋರ್ಟ್‌ ತೀರ್ಪು ಬಗ್ಗೆ ತಜ್ಞರೊಂದಿಗೆ ಚರ್ಚೆ
Last Updated 22 ಆಗಸ್ಟ್ 2022, 21:11 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ವಿರುದ್ಧ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯ ಅಸ್ತ್ರ ಝಳಪಿಸಲು ಲೋಕಾಯುಕ್ತ ಮತ್ತೆ ಸಜ್ಜಾಗಿದೆ. ದೂರು ಬಂದರೆ ತಕ್ಷಣದಲ್ಲೇ ಪ್ರಕರಣ ದಾಖಲಿಸಲು ಲೋಕಾ
ಯುಕ್ತ ಪೊಲೀಸ್‌ ಘಟಕವು ಸನ್ನದ್ಧವಾಗಿದೆ.

ಹೈಕೋರ್ಟ್‌ ತೀರ್ಪಿನ ಕುರಿತು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ಸಂಸ್ಥೆಯ ಪೊಲೀಸ್‌ ಘಟಕ ಹಾಗೂ ನ್ಯಾಯಾಂಗ ವಿಭಾಗದ ಅಧಿಕಾರಿಗಳ ಜತೆಗೂ ಸರಣಿ ಸಭೆಗಳನ್ನು ನಡೆಸಿದ್ದಾರೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಆರೋಪದಡಿಚುನಾಯಿತ ಪ್ರತಿನಿಧಿಗಳ ಹಾಗೂ ಸರ್ಕಾರಿ ನೌಕರರ ವಿರುದ್ಧ ದೂರುಗಳು ಸಲ್ಲಿಕೆಯಾದರೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿ, ತನಿಖೆ ಆರಂಭಿಸುವಂತೆ ಪೊಲೀಸ್‌ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್‌ ಘಟಕದ ಎಲ್ಲ ಇನ್‌ಸ್ಪೆಕ್ಟರ್‌ಗಳಿಗೆ ನೀಡಿ 1991ರ ಫೆಬ್ರುವರಿ 2ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಲೋಕಾಯುಕ್ತದ ಪೊಲೀಸ್‌ ಇನ್‌ಸ್ಪೆಕ್ಟರ್ ಕಚೇರಿಗಳನ್ನು ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌2ರ ಅಡಿ ಪೊಲೀಸ್‌ ಠಾಣೆಗಳೆಂದು ಘೋಷಿಸಿ 2002ರ ಮೇ 8 ಮತ್ತು ಡಿಸೆಂಬರ್‌ 12ರಂದು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.

ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಳಕೆಗೆ ಅಧಿಕಾರ ನೀಡಿದ್ದ ಮೂರೂ ಆದೇಶಗಳನ್ನು ಹಿಂಪಡೆದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಸ್ತಿತ್ವಕ್ಕೆ ತಂದಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016ರ ಮಾರ್ಚ್‌ 14ರಂದು ಆದೇಶ ಹೊರಡಿಸಿತ್ತು. ಈ ಅಧಿಸೂಚನೆಯನ್ನು ರದ್ದುಗೊಳಿಸಿ ಇದೇ ಆಗಸ್ಟ್‌ 11ರಂದು ತೀರ್ಪು ನೀಡಿರುವ ಹೈಕೋರ್ಟ್‌, ಲೋಕಾಯುಕ್ತಕ್ಕೆ ಬಲ ನೀಡಿದ್ದ ಹಿಂದಿನ ಎಲ್ಲ ಅಧಿಸೂಚನೆಗಳನ್ನೂ ಕಾಪಾಡಿಕೊಂಡು ಹೋಗುವಂತೆ ಆದೇಶಿಸಿತ್ತು.

ಪ್ರಕರಣ ಹಸ್ತಾಂತರಕ್ಕೆ ಎಸಿಬಿ ಸಿದ್ಧತೆ

ರಾಜ್ಯದಾದ್ಯಂತ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸ್‌ ಠಾಣೆಗಳಲ್ಲಿ ತನಿಖಾ ಹಂತದಲ್ಲಿರುವ 2,149 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ.

ಲಂಚ ಪ್ರಕರಣ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ, ಅಧಿಕಾರ ದುರ್ಬಳಕೆ ಆರೋಪದಡಿ ಸರ್ಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳ ವಿರುದ್ಧ ಎಸಿಬಿ ದಾಖಲಿಸಿದ್ದ ಈ ಪ್ರಕರಣಗಳ ತನಿಖೆ ಸಂಪೂರ್ಣ ಸ್ಥಗಿತಗೊಂಡಿದೆ.

ತನಿಖಾ ಹಂತದಲ್ಲಿರುವ ಪ್ರಕರಣಗಳ ಕೇಸ್‌ ಡೈರಿ, ಸಂಕ್ಷಿಪ್ತ ವರದಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡಲಾಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳು, ಪೊಲೀಸ್‌ ವಿಭಾಗದಲ್ಲಿ ಪ್ರಾಥಮಿಕ ವಿಚಾರಣೆ ಹಂತದಲ್ಲಿರುವ ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಅದೇ ಮಾದರಿಯಲ್ಲಿ ಕಡತದ ರೂಪದಲ್ಲಿ ಸಿದ್ಧಪಡಿಸುವ ಕೆಲಸದಲ್ಲಿ ಎಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.

ಯಾವುದೇ ಹೊಸ ದೂರುಗಳನ್ನು ಸ್ವೀಕರಿಸದಂತೆ ಮತ್ತು ಪ್ರಕರಣ ದಾಖಲು ಮಾಡಿಕೊಳ್ಳದಂತೆ ಹೈಕೋರ್ಟ್‌ ತೀರ್ಪು ಪ್ರಕಟವಾದ ದಿನವೇ (ಆಗಸ್ಟ್‌ 11) ಎಸಿಬಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ತಮ್ಮ ಅಧೀನ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದರು. ಆ ಕ್ಷಣದಿಂದಲೇ ತನಿಖಾ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

‘ತನಿಖಾ ಹಂತದಲ್ಲಿರುವ ಪ್ರಕರಣಗಳು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳು, ದೂರುಗಳ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ಪ್ರತ್ಯೇಕ ಕಡತಗಳಲ್ಲಿ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟವಾದ ತಕ್ಷಣವೇ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ಹಸ್ತಾಂತರಿಸಲಾಗುವುದು’ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಪ್ರಭಾವಿಗಳ ವಿರುದ್ಧವೂ ತನಿಖೆ ಸಾಧ್ಯ’

‘ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹಿಂದಿನ ಅಧಿಕಾರ ಪುನಃ ದೊರಕಿರುವುದರಿಂದ ಶಾಸಕರು, ಸಚಿವರು, ಮುಖ್ಯಮಂತ್ರಿ ವಿರುದ್ಧವೂ ಪ್ರಕರಣ ದಾಖಲಿಸಿ, ತನಿಖೆ ನಡೆಸಬಹುದು. ಯಾವುದೇ ಹಂತದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ಮಾಜಿ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ.

ಎಸಿಬಿಯಲ್ಲಿ ದೊಡ್ಡವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಉದಾಹರಣೆ ಕಡಿಮೆ. ಈಗ ಲೋಕಾಯುಕ್ತ ಪೊಲೀಸ್‌ ವಿಭಾಗ ಹೆಚ್ಚು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶವಿದೆ. ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸಿದರೆ ಅದು ಸಾಧ್ಯವಾಗುತ್ತದೆ ಎಂದರು.

ಲೋಕಾಯುಕ್ತ ಪೊಲೀಸ್‌ ಬಲಾಬಲ

ಹುದ್ದೆ;ಮಂಜೂರಾತಿ;ಭರ್ತಿ

ಎಡಿಜಿಪಿ;01;01

ಐಜಿಪಿ/ಡಿಐಜಿ;01;0

ಎಸ್‌ಪಿ;22;17

ಡಿವೈಎಸ್‌ಪಿ;42;39

ಇನ್‌ಸ್ಪೆಕ್ಟರ್‌;88;70

ಪಿಎಸ್‌ಐ;12;02

ಹೆಡ್‌ ಕಾನ್‌ಸ್ಟೆಬಲ್‌;144;84

ಕಾನ್‌ಸ್ಟೆಬಲ್‌;232;133

ಎಸಿಬಿ ಬಲಾಬಲ

ಎಡಿಜಿಪಿ;01

ಐಜಿಪಿ;01

ಎಸ್‌ಪಿ;10

ಡಿವೈಎಸ್‌ಪಿ;35

ಇನ್‌ಸ್ಪೆಕ್ಟರ್‌;75

ಹೆಡ್‌ ಕಾನ್‌ಸ್ಟೆಬಲ್‌/ಕಾನ್‌ಸ್ಟೆಬಲ್‌;200

ಭವಿಷ್ಯದ ಯೋಚನೆಯಲ್ಲಿ ಎಸಿಬಿ ಅಧಿಕಾರಿಗಳು

ಎಸಿಬಿಯಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ 322 ಹುದ್ದೆಗಳಿಗೆ ಮಂಜೂರಾತಿ ಇದ್ದು, ಬಹುತೇಕ ಭರ್ತಿಯಾಗಿಯೇ ಇವೆ. ಈಗ ಸಂಸ್ಥೆಯೇ ರದ್ದಾಗಿರುವುದರಿಂದ ಮುಂದೆ ತಮ್ಮನ್ನು ಯಾವ ಹುದ್ದೆಗಳಿಗೆ ವರ್ಗಾಯಿಸಬಹುದೆಂಬ ಚರ್ಚೆ ಎಸಿಬಿ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ.

ಲೋಕಾಯುಕ್ತದಲ್ಲಿ 166 ಪೊಲೀಸ್‌ ಅಧಿಕಾರಿಗಳ ಹುದ್ದೆಗಳಲ್ಲಿ 37 ಖಾಲಿ ಇವೆ. 376 ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳ ಪೈಕಿ 159 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಲೋಕಾಯುಕ್ತ ಪೊಲೀಸ್‌ ವಿಭಾಗವು ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT