ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ, ಜಾನುವಾರು ರಕ್ಷಣೆಗೆ ಕ್ರಮ ವಹಿಸಿ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಸೂಚನೆ

ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ನೆರೆಯ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ತಿಳಿಸಿದ್ದಾರೆ. ಇದರಿಂದ ಪ್ರವಾಹ ಸ್ಥಿತಿಯ ಸಮರ್ಪಕ ನಿರ್ವಹಣೆಗೆ ಅನುಕೂಲವಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಪ್ರವಾಹ ಸಿದ್ಧತೆ ಕುರಿತು ಬೆಳಗಾವಿ ಸೇರಿದಂತೆ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಶನಿವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಜಲಾಶಯಗಳಿಂದ ನೀರು ಬಿಡುಗಡೆ ಕುರಿತ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಅಲ್ಲಿಂದ ಬಿಡುಗಡೆಯಾಗುವ ನೀರು ಬೆಳಗಾವಿ ಮತ್ತಿತರ ನದಿ ಪಾತ್ರದ ಜಿಲ್ಲೆಗಳಿಗೆ ತಲುಪಲು ಒಂದು ದಿನ ಬೇಕಾಗುವುದರಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸಮಯಾವಕಾಶ ಸಿಗಲಿದೆ. ಜಲಾಶಯಗಳಿಂದ ನೀರು ಬಿಡುಗಡೆ ಹಾಗೂ ನೀರಿನಮಟ್ಟದ ಕುರಿತು ನಿರಂತರ ನಿಗಾ ವಹಿಸಬೇಕು ಮತ್ತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯ ಪ್ರಸ್ತುತ ಸನ್ನಿವೇಶದ ಮಾಹಿತಿ ಪಡೆದ ಅವರು, ‘ಜನರು ಮತ್ತು ಜಾನುವಾರುಗಳ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಪ್ರವಾಹ ಪರಿಸ್ಥಿತಿ ಇಲ್ಲ: ಜಿಲ್ಲಾಧಿಕಾರಿ

‘ಎರಡು ದಿನಗಳಿಂದ ಹೆಚ್ಚಿನ ಮಳೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿಲ್ಲ. ವೇದಗಂಗಾ ನದಿ ಮಾತ್ರ ಸ್ವಲ್ಪಮಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿದೆ. ನದಿ ಪಾತ್ರದ ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಎರಡು ವರ್ಷಗಳ ಅನುಭವದ ಆಧಾರದ ಮೇಲೆ 208 ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ರಚಿಸಲಾಗಿರುವ ಪ್ರವಾಹ ನಿರ್ವಹಣಾ ತಂಡಗಳ ಸದಸ್ಯರಿಗೆ ಅಗತ್ಯ ತರಬೇತಿ ನೀಡಲಾಗಿದೆ. ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 26 ಬೋಟ್‌ಗಳು ಲಭ್ಯವಿದ್ದು, ನದಿತೀರದ ಗ್ರಾಮಗಳಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲು 2 ಎಸ್.ಡಿ.ಆರ್.ಎಫ್. ಹಾಗೂ ಒಂದು ಎನ್.ಡಿ.ಆರ್.ಎಫ್. ತಂಡಗಳು ಬೀಡು ಬಿಟ್ಟಿವೆ’ ಎಂದರು.

‘ಪರಿಹಾರ ಕೇಂದ್ರದ ಸಮೀಪದಲ್ಲಿ 230 ಜಾನುವಾರು ಶಿಬಿರಗಳನ್ನು ಗುರುತಿಸಲಾಗಿದೆ. ಸಾಕಷ್ಟು ಮೇವು ದಾಸ್ತಾನು ಕೂಡ ಇದೆ. ಪಿಡಿ ಖಾತೆ ₹92 ಕೋಟಿ ಲಭ್ಯವಿದ್ದು, ಪ್ರವಾಹ ಮತ್ತಿತರ ತುರ್ತು ಪರಿಸ್ಥಿತಿ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲ’ ಎಂದು ವಿವರಿಸಿದರು.‌

‘ಕಳೆದ ಬಾರಿ ಪ್ರವಾಹದಿಂದ ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ರಾಜ್ಯದಾದ್ಯಂತ 2021-22 ಸಾಲಿನಲ್ಲಿ ಕೂಡ ಅನೇಕ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಗೆ ಕನಿಷ್ಠ ₹1ಸಾವಿರ ಕೋಟಿ ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಕೋರಿದರು.

ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT