ಭಾನುವಾರ, ನವೆಂಬರ್ 29, 2020
19 °C
ಮುಖಗವಸು ಧರಿಸುವಿಕೆ– ಪರಿಷ್ಕೃತ ನಿಯಮ ಜಾರಿಗೊಳಿಸಿ ಬಿಬಿಎಂಪಿ ಆದೇಶ

ಐದು ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್‌ ಕಡ್ಡಾಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಖಗವಸು (ಮಾಸ್ಕ್‌) ಧರಿಸುವುದು ಕಡ್ಡಾಯವಲ್ಲ ಎಂದು ಬಿಬಿಎಂಪಿ ಹೇಳಿದೆ.

ಮಕ್ಕಳ ಬೆಳವಣಿಗೆ ಮೈಲಿಗಲ್ಲು, ಈ ನಿಯಮ ಪಾಲನೆಗೆ ಸಂಬಂಧಿಸಿದ ಸವಾಲುಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾಸ್ಕ್‌ಗಳನ್ನು ಸಮರ್ಪಕವಾಗಿ ಧರಿಸುವುದಕ್ಕೆ ಸ್ವಂತಿಕೆ ಅಗತ್ಯ ಇರುವುದರಿಂದ ಈ ವಿನಾಯಿತಿ ನೀಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಮಾಸ್ಕ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ರಾಜ್ಯ ಸರ್ಕಾರ ನೇಮಿಸಿದ್ದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಕೆಲವೊಂದು ಸಂದೇಹಗಳಿಗೆ ಸ್ಪಷ್ಟೀಕರಣ ಕೇಳಿತ್ತು. ಸಮಿತಿ ನೀಡಿದ ಸಲಹೆ ಆಧಾರದಲ್ಲಿ ಬಿಬಿಎಂಪಿ ಮಾಸ್ಕ್‌ ಧರಿಸುವುದಕ್ಕೆ ಸಂಬಂಧಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಮುಚ್ಚಿದ ಅಥವಾ ಸಾಕಷ್ಟು ಗಾಳಿಯಾಡದ ಕಡೆ, ಜನಜಂಗುಳಿ ಇರುವ ಸ್ಥಳಗಳಲ್ಲಿ ಹಾಗೂ ಜನ ಹತ್ತಿರ ಹತ್ತಿರ ಕುಳಿತು ಮಾತುಕತೆಯಲ್ಲಿ ತೊಡಗುವ ಸಂದರ್ಭಗಳಲ್ಲಿ ಮಾಸ್ಕ್‌ ಧರಿಸಿರುವುದು ತೀರಾ ಅಗತ್ಯ ಎಂದು ಬಿಬಿಎಂಪಿ ಸೂಚಿಸಿದೆ.

ವಾಹನದಲ್ಲಿ ಗಾಜುಗಳನ್ನು ಮುಚ್ಚಿಕೊಂಡು ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯ. ವಾಹನದಲ್ಲಿ ಚಾಲಕನೊಬ್ಬನೇ ಪ್ರಯಾಣಿಸುವಾಗಲೂ ಮಾಸ್ಕ್‌ ತೊಟ್ಟಿರಬೇಕು. ವಾಹನವನ್ನು ಸಂಚಾರ ಸಿಗ್ನಲ್‌ಗಳ ಬಳಿ ನಿಲ್ಲಿಸಿ ಗಾಜುಗಳನ್ನು ಕೆಳಕ್ಕೆ ಇಳಿಸಿದರೆ ಅಥವಾ ವಾಹನ ನಿಲ್ಲಿಸಿದಾಗ ಪ್ರಯಾಣಿಕರು ಇತರರ ಜೊತೆ ಮಾತನಾಡುತ್ತಿದ್ದರೆ ಆಗಲೂ  ಮಾಸ್ಕ್ ಧರಿಸಿರಬೇಕು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ದ್ವಿಚಕ್ರ ವಾಹನದಲ್ಲಿ ಒಬ್ಬ ಅಥವಾ ಇಬ್ಬರು ಸಾಗುತ್ತಿದ್ದರೆ ಆಗಲೂ ಮಾಸ್ಕ್‌ ಧರಿಸುವುದು ಕಡ್ಡಾಯ. ದ್ವಿಚಕ್ರ ವಾಹನ ನಿಲ್ಲಿಸಿದ್ದಾಗಲೂ ಸವಾರ ಮುಖಗವಸು ಧರಿಸಿರಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮಂಗಳವಾರ ಹೊರಡಿಸಿದ ಆದೇಶದಲ್ಲಿ  ತಿಳಿಸಿದ್ದಾರೆ.

ಮಾಸ್ಕ್‌ ಧರಿಸುವಿಕೆ– ಯಾವುದಕ್ಕೆ ವಿನಾಯಿತಿ?

* ಆಹಾರ ಸೇವಿಸುವಾಗ, ಕುಡಿಯುವಾಗ 

* ಸಂಗೀತ ವಾದ್ಯ ನುಡಿಸುವಾಗ (ಕೊಳಲು ಮೌತ್‌ ಆರ್ಗನ್‌ ಇತ್ಯಾದಿ)

* ಮುಖ ಒದ್ದೆಯಾಗುವಂತಹ ಚಟುವಟಿಕೆ ವೇಳೆ (ಈಜುವುದು, ಸ್ನಾನ ಮಾಡುವುದು)

* ಕಾನೂನು ಪಾಲನೆಗಾಗಿ ಗುರುತು ಪತ್ತೆಗೆ ತಪಾಸಣೆ ನಡೆಸಬೇಕಾದಾಗ

* ಶ್ರವಣ ಸಾಧನ ಧರಿಸಿದ ವ್ಯಕ್ತಿ ಜೊತೆ ಸಂವಹನ ನಡೆಸಬೇಕಾದಾಗ

* ಹಲ್ಲು ಅಥವಾ ವೈದ್ಯಕೀಯ ತಪಾಸಣೆ ವೇಳೆ (ಮಾಸ್ಕ್‌ ಧರಿಸಿದಾಗ ತಪಾಸಣೆ ನಡೆಸಲಾಗದು ಎಂದಾದರೆ)

* ಮೇಲಿನ ಸಂದರ್ಭಗಳು ಅನ್ವಯವಾಗದೇ ಹೋದಾಗ ಸಾರ್ವಜನಿಕ ಆರೋಗ್ಯ ತಜ್ಞರ ಅಥವಾ ವೈದ್ಯರ ಸಲಹೆ ಪಾಲಿಸುವುದು

–0–

ಮಾಸ್ಕ್‌ ಧರಿಸಲು ಮಾರ್ಗಸೂಚಿಗಳು

* ಆರೋಗ್ಯವಂತರು ಇರುವ ಮನೆಯಲ್ಲಿ; ಅಗತ್ಯವಿಲ್ಲ

* ಮನೆಯಲ್ಲೇ ಪ್ರತ್ಯೇಕವಾಸ, ಮನೆಯಲ್ಲೇ ಚಿಕಿತ್ಸೆ ಪಡೆಯುವ ಸೋಂಕಿತರು; ಮೂರು ಪದರಗಳ ವೈದ್ಯಕೀಯ ಮಾಸ್ಕ್‌ ಕಡ್ಡಾಯ

* ಮನೆಯಲ್ಲಿ ಸೋಂಕಿತರಿದ್ದಾಗ ಕುಟುಂಬದ ಸದಸ್ಯರು, ಅವರ ಆರೈಕೆ ಮಾಡುವವರು; ಮಾಮೂಲಿ ಮುಖಗವಸು 

* ಕ್ವಾರಂಟೈನ್‌ ಆಗಿರುವವರು ಇರುವ ಮನೆ; ಮಾಸ್ಕ್‌ ಅಗತ್ಯ

* ಕಚೇರಿ/ ಕೆಲಸದ ಸ್ಥಳ; ಮಾಸ್ಕ್‌ ಅಗತ್ಯ

* ಪೂಜಾ ಸ್ಥಳ; ಮಾಸ್ಕ್‌ ಅಗತ್ಯ

* ಸಾಮಾಜಿಕ ಸಮಾರಂಭ (ಮದುವೆ, ಕಾರ್ಯಕ್ರಮ, ಅಂತ್ಯಸಂಸ್ಕಾರ); ಮಾಸ್ಕ್ ಅಗತ್ಯ

* ದೀರ್ಘಾವಧಿ ಆರೈಕೆ ನೀಡುವ ಸ್ಥಳ (ವೃದ್ಧಾಶ್ರಮ, ಅನಾಥಾಶ್ರಮ); ಮಾಸ್ಕ್‌ ಅಗತ್ಯ (ವೈದ್ಯರ ಸಲಹೆ ಆಧರಿಸಿ)

* ಜೈಲು; ಮಾಸ್ಕ್‌ ಅಗತ್ಯ (ವೈದ್ಯರ ಸಲಹೆ ಆಧರಿಸಿ)

* ಸಾರ್ವಜನಿಕ ಸಾರಿಗೆ (ಬಸ್‌, ರೈಲು ಮೆಟ್ರೊ, ವಿಮಾನ); ಮಾಸ್ಕ್‌ ಅಗತ್ಯ

* ಖಾಸಗಿ ವಾಹನ (ಕಾರು, ದ್ವಿಚಕ್ರ ವಾಹನ); ಮಾಸ್ಕ್‌ ಅಗತ್ಯ

* ಜನಜಂಗುಳಿ ಇರುವ ಸಾರ್ವಜನಿಕ ಪ್ರದೇಶ (ಬಸ್‌ನಿಲ್ದಾಣ, ರೈಲು ನಿಲ್ದಾಣ); ಮಾಸ್ಕ್‌ ಅಗತ್ಯ

* ರೆಸ್ಟೋರಂಟ್‌/ ಬಾರ್‌/ ಆಹಾರ ಮಳಿಗೆ; ಕುಡಿಯುವಾಗ, ತಿನ್ನುವಾಗ ಮಾಸ್ಕ್‌ ತೆಗೆಯಬಹುದು, ಸೇವೆ ಒದಗಿಸುವವರಿಗೆ ಮಾಸ್ಕ್‌ ಕಡ್ಡಾಯ

* ಸಲೂನ್, ಸ್ಪಾ, ಕ್ಷೌರಿಕರ ಮಳಿಗೆ; ಸೇವೆ ಒದಗಿಸುವವರಿಗೆ ಮಾಸ್ಕ್‌ ಅಗತ್ಯ

* ಮಾಲ್‌, ಮಾರುಕಟ್ಟೆ, ಮಳಿಗೆ, ವ್ಯಾಪಾರ ಮಳಿಗೆ; ಮಾಸ್ಕ್‌ ಅಗತ್ಯ

* ಕ್ರೀಡಾಂಗಣ, ಕ್ರೀಡಾಸಂಕೀರ್ಣಗಳಲ್ಲಿ ಪ್ರೇಕ್ಷಕರು, ಸಂದರ್ಶಕರು; ಮಾಸ್ಕ್‌ ಅಗತ್ಯ

* ಈಜು ಕೊಳ; ಈಜುವಾಗ ಮಾಸ್ಕ್‌ ಅಗತ್ಯವಿಲ್ಲ

* ಶಾಲಾ, ಕಾಲೇಜು; ಮಾಸ್ಕ್‌ ಅಗತ್ಯ

* ಸಿನಿಮಾ ಮಂದಿರ;ಮಾಸ್ಕ್‌ ಅಗತ್ಯ

* ಮನರಂಜನಾ ಪಾರ್ಕ್‌; ಮಾಸ್ಕ್‌ ಅಗತ್ಯ

* ಪರಿಹಾರ ಕೇಂದ್ರ; ಮಾಸ್ಕ್‌ ಅಗತ್ಯ

* ಸಾರ್ವಜನಿಕ ಶೌಚಾಲಯ; ಮಾಸ್ಕ್‌ ಅಗತ್ಯ

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು