ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕದಲ್ಲೇ ಉಳಿಯುತ್ತಿದೆ ನ್ಯಾಯ: ವಿವೇಕ ರೈ

ಐವರು ಸಾಧಕರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ
Last Updated 27 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯ ಎನ್ನುವುದು ನ್ಯಾಯಾಲಯ ಮತ್ತು ಕಾನೂನು ಪುಸ್ತಕದಲ್ಲಿ ಮಾತ್ರ ಉಳಿದು ಸಂಕುಚಿತಗೊಳ್ಳುತ್ತಿದೆ. ನೈತಿಕ ನೆಲೆಯಲ್ಲಿ ನ್ಯಾಯವನ್ನು ನೋಡುವ ಚಿಂತನಾ ಕ್ರಮವನ್ನು ನಾವು ಕಳೆದುಕೊಂಡಿದ್ದೇವೆ’ ಎಂದು ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಬೇಸರ ವ್ಯಕ್ತಪಡಿಸಿದರು.

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ‘ಮಾಸ್ತಿ ಪ್ರಶಸ್ತಿ’ಯನ್ನು ಲೇಖಕರಾದ ಸಂಧ್ಯಾ ಎಸ್. ಪೈ, ಎಸ್‌.ಆರ್. ವಿಜಯಶಂಕರ, ಸುಬ್ರಾಯ ಚೊಕ್ಕಾಡಿ, ಕೇಶವರೆಡ್ಡಿ ಹಂದ್ರಾಳ, ಸ. ರಘುನಾಥ ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಲ್ಲಿ ಪುರುಷೋತ್ತಮ ಬಿಳಿಮಲೆ ಗೈರಾಗಿದ್ದರು. ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

‘ಐಪಿಸಿ ಸೆಕ್ಷನ್ ಪ್ರಕಾರ ನ್ಯಾಯ ಹೇಳುತ್ತಾ ಹೋದರೆ ಎಲ್ಲರೂ ತಪ್ಪಿತಸ್ಥರಾಗುತ್ತಾ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನೈತಿಕ ನೆಲೆಯಲ್ಲಿ ನ್ಯಾಯವನ್ನು ನೋಡಬೇಕಾಗುತ್ತದೆ. ಮಾಸ್ತಿ ಅವರು ಸಾಮಾಜಿಕ ನೈತಿಕತೆಯ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದರು.ನೈತಿಕತೆಯು ಸಾಮಾಜಿಕತೆಗಿಂತ ಹೇಗೆ ಭಿನ್ನ ಎನ್ನುವುದನ್ನು ಅವರು ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಅವರ ಸಾಹಿತ್ಯವು ಬದುಕಿನ ಸೂಕ್ಷ್ಮತೆಯನ್ನು ಹೇಳುತ್ತದೆ. ಇವತ್ತು ನಾವು ಬದುಕು ಮತ್ತು ಸಾಹಿತ್ಯದಲ್ಲಿ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ’ ಎಂದು ವಿವೇಕ ರೈ ತಿಳಿಸಿದರು.

‘ಪುರಾಣ, ಇತಿಹಾಸ ಮತ್ತು ವರ್ತಮಾನ ಮೂರನ್ನೂ ಮಾಸ್ತಿ ಒಂದುಗೂಡಿಸಿಕೊಂಡು ಬರೆದರು. ಪಶ್ಚಿಮ ಮತ್ತು ಪೂರ್ವದ ಇತಿಹಾಸವನ್ನು ಒಂದು ಕಡೆ ಮುಖಾಮುಖಿ ಮಾಡಿ ನೋಡಿದರು. ಹಾಗಾಗಿ, ಅವರ ಸಣ್ಣ ಕಥೆ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯದ ಯಾವುದೇ ಪ್ರಕಾರ ತೆಗೆದುಕೊಂಡರೂ ಮಾಸ್ತಿ ಇವತ್ತಿಗೂ ಪ್ರಸ್ತುತ’ ಎಂದರು.

‘ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, ‘ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳ ಬಗ್ಗೆ ತಿಳಿಸಿಕೊಡುವ ಸಾಹಿತ್ಯ ಕೃತಿಗಳು ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿಲ್ಲ. ಕಥೆಗಳಲ್ಲಿ ಅಲ್ಲಲ್ಲಿ ಬರುತ್ತವೆಯಾದರೂ ಮಕ್ಕಳು ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಕಡಿಮೆ. ಹಾಗಾಗಿ, ಈ ತರಹದ ಸಾಹಿತ್ಯವನ್ನು ಸೃಷ್ಟಿಸುವ ಕೆಲಸ ಹೆಚ್ಚಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT