ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರ ಮರಣ ಅಪಮಾನ: ಡಾ.ಕೆ. ಸುಧಾಕರ್

ಅನಿಮೀಯಾ ಮುಕ್ತ ಕರ್ನಾಟಕ ಕಾರ್ಯಾಗಾರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ
Last Updated 7 ಡಿಸೆಂಬರ್ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಯಂದಿರ ಆರೋಗ್ಯ ತಪಾಸಣೆ ಪರಂಪರೆಯಂತೆ ಬೆಳೆಯಬೇಕು. ಇಂದಿನ ಕಾಲದಲ್ಲೂ ಹೆರಿಗೆ ವೇಳೆ ತಾಯಂದಿರ ಮರಣ ಸಂಭವಿಸುತ್ತಿರುವುದು ಅಪಮಾನದ ಸಂಗತಿ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಆರೋಗ್ಯ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಅಪೌಷ್ಟಿಕತೆ ಮತ್ತುಅನಿಮೀಯಾ ಮುಕ್ತ ಕರ್ನಾಟಕ’ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು. ‘ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗೆ ಆರಂಭಿಕ ಹಂತದಲ್ಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಗ್ಗೂಡಿಸಿ,ಶಾಲೆ ಸೇರಿ ಮಕ್ಕಳಿರುವ ಜಾಗಗಳಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು’ ಎಂದು ಹೇಳಿದರು

‘ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಒಂದು ಪರಂಪರೆಯ ರೂಢಿಯಾಗಿ ಬೆಳೆದು ಬಂದಿದೆ. ಇದೇ ರೀತಿ, ರಾಜ್ಯದಲ್ಲಿ ಮಹಿಳೆಯರು, ತಾಯಂದಿರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದನ್ನು ಪರಂಪರೆಯಂತೆ ಬೆಳೆಸಬೇಕು’ ಎಂದು ತಿಳಿಸಿದರು.

ಮರಣ ಪ್ರಮಾಣ ಇಳಿಕೆ:‘ರಿಜಿಸ್ಟರ್‌ ಜನರಲ್‌ ಆಫ್‌ ಇಂಡಿಯಾದ ಪ್ರಕಾರ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ2001-2003ರಲ್ಲಿ 301ರಷ್ಟಿತ್ತು. ಈ ಪ್ರಮಾಣ2018-2020ರಲ್ಲಿ 97ಕ್ಕೆ ಇಳಿದಿದೆ. ಅದೇ ರೀತಿ, 2005ರಲ್ಲಿ 58 ಇದ್ದ ಶಿಶು ಮರಣ ಪ್ರಮಾಣ, 2021ರಲ್ಲಿ 27ಕ್ಕೆ ಇಳಿದಿದೆ. ಈ ಬಗ್ಗೆ ಸ್ವಲ್ಪ ಸಮಾಧಾನ ಇದ್ದರೂ ಮುಂದುವರಿಯಬೇಕಾದ ದಾರಿ ಇನ್ನಷ್ಟು ಇದೆ’ ಎಂದು ಡಾ.ಕೆ. ಸುಧಾಕರ್ ಹೇಳಿದರು.

‘ಮಗು ಜನಿಸಿದ ನಂತರ ಎರಡು ವರ್ಷಗಳಲ್ಲೇ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಸಮಸ್ಯೆ ಪತ್ತೆ ಮಾಡಿ, ಪರಿಹರಿಸದಿದ್ದರೆ ಅದು ಮಿದುಳಿನ ಆರೋಗ್ಯ ಮೇಲೆ ಹಾಗೂ ಶರೀರದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಗು ಜನಿಸಿದ ಮೊದಲ ಸಾವಿರ ದಿನಗಳಲ್ಲಿ ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗೆ ಕ್ರಮ ವಹಿಸಬೇಕು. ಅದರಲ್ಲೂ ಹೆಣ್ಣುಮಕ್ಕಳು ಅಪೌಷ್ಟಿಕತೆಗೆ ಒಳಗಾದರೆ, ಅವರು ಬೆಳೆದು ಮಗುವಿಗೆ ಜನ್ಮ ನೀಡುವಾಗ ಆ ಮಗು ಕಡಿಮೆ ತೂಕ ಹೊಂದಿರುವ ಸಮಸ್ಯೆ ಎದುರಾಗುತ್ತದೆ’ ಎಂದರು.

‘ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪಾಲು’

‘ಬಜೆಟ್‌ನಲ್ಲಿ ಶೇ 8ರಷ್ಟು ಪಾಲನ್ನು ಆರೋಗ್ಯ ವಲಯಕ್ಕೆ ಮೀಸಲಿಡಬೇಕು ಎಂಬುದು ತಜ್ಞರ ಅಭಿಪ್ರಾಯ. ಕರ್ನಾಟಕ ಬಜೆಟ್‌ನಲ್ಲಿ ಶೇ 5ರಷ್ಟು ಪಾಲನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಕಳೆದ 2-3 ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರೆತಿದೆ. ಇದರಿಂದಾಗಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ 5-6 ಪಟ್ಟು ಹೆಚ್ಚಳವಾಗಿದೆ’ ಎಂದು ಡಾ.ಕೆ. ಸುಧಾಕರ್ ಹೇಳಿದರು.

‘ರಾಜ್ಯದಲ್ಲಿ 6 ಸಾವಿರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗುರಿ ನೀಡಿತ್ತು. ರಾಜ್ಯದಲ್ಲಿ 8,250 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಮಕ್ಕಳ ತಜ್ಞ ಡಾ. ವಿನೋದ್‌ ಕುಮಾರ್ ಪೌಲ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT