ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇದಾರ ಅಭಿವೃದ್ಧಿ ನಿಗಮ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ
Last Updated 7 ಜನವರಿ 2023, 13:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿದಿರು ಅಭಿವೃದ್ಧಿ ಹಾಗೂ ಬಿದಿರು ಉತ್ಪನ್ನಗಳ ಸಂರಕ್ಷಣೆಗಾಗಿ ಮೇದಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಕೇತೇಶ್ವರ ಜಯಂತಿ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಇಲ್ಲಿನ ಮೇದಾರ ಗುರುಪೀಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೇದಾರ ಬುಡಕಟ್ಟು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮೇದಾರ ಸಮುದಾಯದ ಕುಲಕಸುಬಿಗೆ ಬೆಂಬಲ ನೀಡುವ ಉದ್ದೇಶದಿಂದ ನಿಗಮ ಸ್ಥಾಪಿಸುವ ಅಗತ್ಯವಿದೆ. ಬಿದಿರು ಬೆಳೆಯಲು ಭೂಮಿ ಮೀಸಲು ಇಡಲಾಗುವುದು. ಅರಣ್ಯ ಇಲಾಖೆ ಪೂರೈಕೆ ಮಾಡುವ ಬಿದಿರಿಗೆ ಯೋಗ್ಯ ದರ ನಿಗದಿಪಡಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ಬಿದಿರು ಉತ್ಪನ್ನಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವ ವಿಚಾರವನ್ನು ಚರ್ಚಿಸಿ ಸಮುದಾಯಕ್ಕೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳುತ್ತೇವೆ. ಬಿದಿರು ಉತ್ಪನ್ನಗಳ ತಯಾರಿಕೆಯಲ್ಲಿ ಹೊಸ ತಂತ್ರಜ್ಞಾನ, ಕೌಶಲ ತರಲು ಪ್ರಯತ್ನಿಸುತ್ತೇವೆ. ಈ ವಸ್ತುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಅಮೇಜಾನ್‌, ಫ್ಲಿಪ್‌ಕಾರ್ಟ್‌ಗೆ ಜೋಡಿಸುವ ಕಾರ್ಯ ಆಗಬೇಕಿದೆ’ ಎಂದರು.

ಸಂಪುಟ ಶೀಘ್ರ ವಿಸ್ತರಣೆ: ಸಿಎಂ

ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ನಾಯಕರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಸಂಪುಟ ಶೀಘ್ರ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆದ ಬಳಿಕ ತೀರ್ಮಾನ ಹೊರಬೀಳಲಿದೆ. ಕೆ.ಎಸ್‌.ಈಶ್ವರಪ್ಪ, ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕಲ್ಪಿಸುವ ಬಗ್ಗೆ ಹೈಕಮಾಂಡ್‌ ನಿರ್ಧರಿಸಲಿದೆ’ ಎಂದು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ನಾವು ಗೌಂಡಿಗಳೇ, ಲೂಟಿಕೋರರಲ್ಲ’

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ನಾವೆಲ್ಲರೂ ದೇಶವನ್ನು ಕಟ್ಟುವ ಗೌಂಡಿಗಳೇ ವಿನಾ ರಾಹುಲ್‌ ಹಾಗೂ ಸೋನಿಯಾಗಾಂಧಿ ಅವರಂತೆ ಲೂಟಿಕೋರರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.

ರಾಮಮಂದಿರ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಷಿ, ‘ರಾಮಮಂದಿರ ಉದ್ಘಾಟನೆ ಮಾಡುವುದಕ್ಕೆ ಏಕಿಷ್ಟು ಹೊಟ್ಟೆಕಿಚ್ಚು? ಹಿಂದೂಗಳ ಬಗ್ಗೆ ನಿಮಗೆ ಏಕೆ ಇಷ್ಟು ದ್ವೇಷ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

‘ಸ್ಯಾಂಟ್ರೊ ರವಿ ಯಾರೂ ಎಂಬುದು ಗೊತ್ತಿಲ್ಲ. ಡಿ.ಕೆ.ಸುರೇಶ್‌ ತಮ್ಮ ಪೂರ್ವಾಶ್ರಮವನ್ನು ನೆನಪಿಸಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಯಾರಿಗೆ ಟೀ ಕೊಡುತ್ತಿದ್ದರು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು’ ಎಂದು ತಿರುಗೇಟು ನೀಡಿದರು.

ಮೇದಾರ ಗುರುಪೀಠದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಶಾಸಕ ಜಗದೀಶ ಶೆಟ್ಟರ್‌, ಮೇದಾರ ಕೇತೇಶ್ವರ ಟ್ರಸ್ಟ್‌ ಅಧ್ಯಕ್ಷ ಸಿ.ಪಿ.ಪಾಟೀಲ, ಮೇದಾರ ಗಿರಿ ಜನಾಂಗ ಕಲ್ಯಾಣ ಸೇವಾ ಸಂಘದ ಅಧ್ಯಕ್ಷ ವೈ.ಕೆ.ಹಳೆಪೇಟೆ ಇದ್ದರು.

***

ಬೇಡಿಕೆ ಈಡೇರಿಸಿಕೊಳ್ಳಲು ಕೆಲ ಸಮುದಾಯ ಬೆದರಿಕೆ ತಂತ್ರ ಅನುಸರಿಸುತ್ತಿವೆ. ಆಡಳಿತ ವ್ಯವಸ್ಥೆಯನ್ನು ಮಠಾಧೀಶರು ಬೇಡಬೇಕೆ ವಿನಾ ದಬ್ಬಾಳಿಕೆ ಮಾಡುವುದಲ್ಲ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ

***

ಮುಖ್ಯಮಂತ್ರಿಯನ್ನು ನಾಯಿಗೆ ಹೋಲಿಸಿದ್ದು ಸರಿಯಲ್ಲ. ಸಿದ್ದರಾಮಯ್ಯ ಕೂಡಲೇ ರಾಜ್ಯದ ಕ್ಷಮೆ ಯಾಚಿಸಬೇಕು. ರಾಹುಲ್‌ ಬಳಿ ಕೈಕಟ್ಟಿ ನಿಲ್ಲುವ ನಿಮಗೆ ಹೀಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ.
ಪ್ರಲ್ಹಾದ್‌ ಜೋಶಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT