ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ: ಕೇಂದ್ರದ ಮೇಲೆ ಒತ್ತಡ ಹಾಕಲು ಬೊಮ್ಮಾಯಿಗೆ ಎಚ್‌ಡಿಕೆ ಆಗ್ರಹ

ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕದ ಪರವಾಗಿ ಇರುವವರು ಯಾರು? ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಆಡಳಿತ ಪಕ್ಷ ಡಿಎಂಕೆ ಕಾಂಗ್ರೆಸ್‌ ಮೇಲೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಮಾತ್ರ ಎರಡೂ ಪಕ್ಷಗಳು ಯೋಜನೆ ಜಾರಿಯಾಗಬೇಕು ಎನ್ನುತ್ತವೆ? ಯಾರು ಯಾರ ಪರ ಇದ್ದೀರಿ?' ಎಂದು ಪ್ರಶ್ನಿಸಿದ್ದಾರೆ.

'ಮೇಕೆದಾಟು ಯೋಜನೆ ಜಾರಿಯಾಗದೆಂದು ಕೇಂದ್ರ ಜಲಸಂಪನ್ಮೂಲ ಸಚಿವರು ಭರವಸೆ ನೀಡಿರುವುದಾಗಿ ತಮಿಳುನಾಡಿನ ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡೂ ನಿನ್ನೆಯಷ್ಟೇ ಪುನರುಚ್ಚರಿಸಿವೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ, ತಮಿಳುನಾಡು ಬಿಜೆಪಿ ಮುಖಂಡ, ಮಾಜಿ ಐಪಿಎಸ್‌ ಅಧಿಕಾರಿಯೊಬ್ಬರು ಮೇಕೆದಾಟು ಯೋಜನೆ ವಿರುದ್ಧ ಉಪವಾಸಕ್ಕೂ ಕೂರುತ್ತಿದ್ದಾರೆ' ಎಂದು ಎಚ್‌ಡಿಕೆ ಟ್ವೀಟಿಸಿದ್ದಾರೆ.

'ಮೇಕೆದಾಟು ಅಣೆಕಟ್ಟು ಯೋಜನೆ ತಮಿಳುನಾಡಿನಲ್ಲಿ ರಾಜಕೀಯ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗಿದ್ದರೆ, ಅದೇ ಮೇಕೆದಾಟು ಯೋಜನೆ ರಾಜ್ಯದಲ್ಲಿನ ಒಡಕುತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ‘ನಾವು ಯೋಜನೆ ಪರ ಇದ್ದೇವೆ’ ಎಂದು ರಾಜ್ಯದ ಮುಖ್ಯಮಂತ್ರಿಯೊಬ್ಬರೇ ಹೇಳಿದರೆ ಸಾಲದು. ಆಡಳಿತ ಪಕ್ಷ ಇದರ ಪರ ಇರುವುದಾಗಿ ಕೆಲಸದ ಮೂಲಕ ಸಾಬೀತು ಮಾಡಬೇಕು' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

'ಅಣೆಕಟ್ಟು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಅನುಮತಿ ಪಡೆಯಲಿಲ್ಲ. ಈಗ ಬೊಮ್ಮಾಯಿ ಅವರೂ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಮಾತಿನಲ್ಲೇ ಉಳಿಯಬಾರದು. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು. ಈ ಕಾರ್ಯವನ್ನು ಜೆಡಿಎಸ್‌ ಯಾವಾಗಲೂ ಬೆಂಬಲಿಸುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

'ಮೇಕೆದಾಟು, ಕೃಷ್ಣಾ, ಮಹದಾಯಿ ಯೋಜನೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಜೆಡಿಎಸ್‌ ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಪ್ರಧಾನಿಯನ್ನೂ ಭೇಟಿಯಾಗಲು ನಿರ್ಧರಿಸಿದ್ದೇವೆ. ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಈ ಯೋಜನೆಗಳ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ' ಎಂದು ಎಚ್‌ಡಿಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT