ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ: ನೀರಿಗಾಗಿ ನಡಿಗೆ; ನಾಯಕರಿಗೆ ಜೈಕಾರ

ಮೇಕೆದಾಟು ಪಾದಯಾತ್ರೆ ಸಮಾರೋಪ ಇಂದು
Last Updated 3 ಮಾರ್ಚ್ 2022, 2:48 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡ ಎರಡನೇ ಹಂತದ ಪಾದಯಾತ್ರೆಯಲ್ಲಿ ಬುಧವಾರ ಕೂಡಾ ‘ಕೈ’ ನಾಯಕರ ಜೊತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ‘ನೀರಿಗಾಗಿ ನಮ್ಮ ಹೋರಾಟ’ ಎನ್ನುತ್ತಲೇ, ಯಾತ್ರೆಯ ಮುಂಚೂಣಿಯಲ್ಲಿದ್ದ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಪರ ಜೈಕಾರ ಹಾಕಿದರು.

ರಾಮನಗರದಿಂದ ಆರಂಭಗೊಂಡ ‘ಮೇಕೆದಾಟು ಪಾದಯಾತ್ರೆ–2.0’ ನಾಲ್ಕನೇ ದಿನ ಅರಮನೆ ಮೈದಾನದಲ್ಲಿ ರಾತ್ರಿ ತಂಗಿದೆ. ಬಸವನಗುಡಿಯಲ್ಲಿರುವ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ಸಮಾರೋಪ ಸಮಾವೇಶ ನಡೆಯಲಿದೆ. ಕೊನೆಯ ದಿನ ಪಾದಯಾತ್ರೆಗೆ ಇನ್ನಷ್ಟು ಹುರುಪು ತುಂಬಲು ಕಾಂಗ್ರೆಸ್‌ ನಾಯಕರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಟಿಎಂ ಲೇಔಟ್‌ನ ಅದ್ವೈತ್‌ ಪೆಟ್ರೋಲ್‌ ಬಂಕ್‌ ಬಳಿಯಿಂದ ಬುಧವಾರ ಬೆಳಿಗ್ಗೆ ಆರಂಭಗೊಂಡ ಪಾದಯಾತ್ರೆ ಕೋರಮಂಗಲ ಫೋರಂ ಮಾಲ್, ವಿವೇಕ ನಗರ, ಟ್ರಿನಿಟಿ ವೃತ್ತ, ಮಿಲ್ಲರ್ಸ್ ರಸ್ತೆ, ಜೆ.ಸಿ. ನಗರ ಮಾರ್ಗವಾಗಿ ಮೇಕ್ರಿ ವೃತ್ತದ ಮೂಲಕ ಅರಮನೆ ಮೈದಾನ ತಲುಪಿತು. ಪಾದಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಪ್ರಯಾಣಿಕರು ಪರದಾಡಿದರು.

ಬೆಳಗ್ಗಿನ ಅವಧಿಯ ಪಾದಯಾತ್ರೆಯಲ್ಲಿ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಆನೇಕಲ್, ಮಹದೇವಪುರ, ಹೊಸಕೋಟೆ, ಮಾಲೂರು ಭಾಗದ ಕಾರ್ಯಕರ್ತರು ಭಾಗವಹಿಸಿದರೆ, ಮಧ್ಯಾಹ್ನದ ಬಳಿಕ ಶಾಂತಿನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ಹೆಬ್ಬಾಳ, ಕೆ.ಆರ್. ಪುರದ ಕಾರ್ಯಕರ್ತರು ಭಾಗವಹಿಸಿದರು.

ತಮಟೆ ನಾದಕ್ಕೆ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್‌ನಾಥ್ ಮತ್ತು ಸಂಗಡಿಗರು ಕುಣಿದರು. ‘ಟಗರು ಬಂತು ಟಗರು’ ಹಾಡಿಗೆ ಸಿದ್ದರಾಮಯ್ಯ ಅವರ ಮುಂಭಾಗದಲ್ಲಿ ಕಾರ್ಯಕರ್ತರು ಭರ್ಜರಿ ಹೆಜ್ಜೆ ಹಾಕಿದರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸಿದ್ದರಾಮಯ್ಯ ಕೂಡಾ ಮೈ ಕುಲುಕಿಸಿದರು!

ರಸ್ತೆಯ ಉದ್ದಕ್ಕೂ ಹಾಕಲಾಗಿದ್ದ ಟೆಂಟ್‌ಗಳಲ್ಲಿ ಕಲ್ಲಂಗಡಿ ಹಣ್ಣು, ಜ್ಯೂಸ್, ಮಜ್ಜಿಗೆ ಹಂಚಿದರು.

ಆಸ್ಟಿನ್ ಟೌನ್‌ ಜಸ್ಮಾದೇವಿ ಭವನದ ಬಳಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಪಾದಯಾತ್ರೆ ಅರಮನೆ ಮೈದಾನದ ಕಡೆ ಹೊರಟಿತು. ಟ್ರಿನಿಟಿ ವೃತ್ತದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರು ಸಿದ್ದರಾಮಯ್ಯ ಅವರಿಗೆ ಕ್ರೇನ್‌ ನೆರವಿನಿಂದ ಬೃಹತ್ ಹಾರ ಹಾಕಿದರು. ಪುಲಕೇಶಿನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಪರ ಕಾರ್ಯಕರ್ತರು ಸಿದ್ದರಾಮಯ್ಯಗೆ ಹೂವಿನ ಮಳೆಗೆರೆದರು.

‘ಮುಂದಿನ ಸಿ.ಎಂ ಸಿದ್ದರಾಮಯ್ಯ’

ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಎಲ್ಲರಿಗಿಂತ ಮೊದಲು ಕಾಲ್ನಡಿಗೆ ಆರಂಭಿಸಿದರು. ಸಿದ್ದರಾಮಯ್ಯ ಮುಂದೆ ಹೋಗುತ್ತಿದ್ದಂತೆ, ವಾಹನ ಏರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕ್ರೇನ್ ಮೂಲಕ ಕಾರ್ಯಕರ್ತರು ಬೃಹತ್ ಹಾರ ಹಾಕಿದರು. ಜೊತೆಗೆ ಯು.ಟಿ. ಖಾದರ್ ಮತ್ತು ಶರತ್ ಬಚ್ಚೇಗೌಡ ಇದ್ದರು. ದಾರಿಯುದ್ದಕ್ಕೂ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜೊತೆ ಫೋಟೊ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. ಅನ್ನದಾತ, ಭಾಗ್ಯವಿದಾತ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಮುಂದಿನ ಸಿ.ಎಂ ಸಿದ್ದರಾಮಯ್ಯ ಎಂಬ ಘೋಷಣೆಯೂ ಕೇಳಿಬಂತು.

‘ಮಹದಾಯಿ ಹೋರಾಟ ಮಾಡೋಣ ಕಣ್ರೀ’

ಹಲಸೂರು ಕೆರೆ ಬಳಿ ಕಾಲ್ನಡಿಗೆ ಸಾಗುತ್ತಿದ್ದಂತೆ, ಉತ್ತರ ಕರ್ನಾಟಕ ಭಾಗದ ಕೆಲವು ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಮುಂದೆ ಮಹದಾಯಿ ಹೋರಾಟದ ವಿಚಾರ ಪ್ರಸ್ತಾಪಿಸಿದರು. ಮೇಕೆದಾಟು ಪಾದಯಾತ್ರೆ ಮುಗಿಯುತ್ತಿದ್ದಂತೆ ಮಹದಾಯಿ ಹೋರಾಟ ಆರಂಭಿಸಬೇಕು ಎಂದು ಮನವಿ ಮಾಡಿದರು. ‘ನಮ್ಮ ಭಾಗದ ಜನರು ಹೋರಾಟಕ್ಕೆ ಕಾಯುತ್ತಿದ್ದಾರೆ’ ಎಂದು ಇತ್ತೀಚೆಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಕೋನರೆಡ್ಡಿ ಸೇರಿದಂತೆ ಹಲವರು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ‘ಮಾಡೋಣ ಕಣ್ರೀ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT