ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಶೆಟ್ಟರ್‌ ನೇತೃತ್ವದ ತಂಡದಿಂದ ಗುಜರಾತ್ ಪ್ರವಾಸ

ವಿಶೇಷ ಹೂಡಿಕೆ ವಲಯ ಅಧ್ಯಯನ: ಧೋಲೇರಾ ‘ಗಿಫ್ಟ್‌ ಸಿಟಿ’ಗೆ ಭೇಟಿ
Last Updated 16 ಜುಲೈ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ವಿಶೇಷ ಹೂಡಿಕೆ ವಲಯ ನಿರ್ಮಾಣ ಕುರಿತು ಅಧ್ಯಯನ ನಡೆಸಲು ರಾಜ್ಯದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡ ಶುಕ್ರವಾರ ಗುಜರಾತ್‌ಗೆ ತೆರಳಿದ್ದು, ಅಲ್ಲಿನ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರನ್ನು ಭೇಟಿಮಾಡಿ ಚರ್ಚಿಸಿದೆ.

ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿ ವಿಶೇಷ ಹೂಡಿಕೆ ವಲಯ ನಿರ್ಮಾಣದ ಪ್ರಸ್ತಾವವಿದೆ. ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಪೂರಕವಾಗಿ ಶೆಟ್ಟರ್‌ ನೇತೃತ್ವದ ತಂದ ಗುಜರಾತ್‌ ಪ್ರವಾಸ ಕೈಗೊಂಡಿದೆ. ಅಲ್ಲಿನ ಧೋಲೇರಾ ‘ಗಿಫ್ಟ್‌ ಸಿಟಿ’ ವಿಶೇಷ ಹೂಡಿಕೆ ವಲಯ ಮತ್ತು ಸ್ಮಾರ್ಟ್‌ ಸಿಟಿಗೂ ಭೇಟಿನೀಡಿದೆ.

ರೂಪಾನಿ ಭೇಟಿ ಬಳಿಕ ಮಾತನಾಡಿದ ಶೆಟ್ಟರ್‌, ‘ದೇಶದ ಮೊದಲ ವಿಶೇಷ ಹೂಡಿಕೆ ವಲಯವನ್ನು ಗುಜರಾತ್‌ ನಿರ್ಮಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿಶೇಷ ಹೂಡಿಕೆ ವಲಯ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಮಾಹಿತಿ ಪಡೆಯಲಾಗಿದೆ’ ಎಂದರು.

ಗುಜರಾತ್‌ನಲ್ಲಿರುವ ಕೈಗಾರಿಕಾ ನೀತಿ, ಭೂಸ್ವಾಧೀನ ಪ್ರಕ್ರಿಯೆ, ಹೂಡಿಕೆದಾರರ ಸಮಾವೇಶ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ರಾಜ್ಯದಲ್ಲಿ ನೀತಿ, ನಿಯಮಗಳಿಗೆ ಮಾಡಬಹುದಾದ ಬದಲಾವಣೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಇನ್‌ವೆಸ್ಟ್‌ ಕರ್ನಾಟಕ ಫೋರಂ ಮುಖ್ಯ ಕಾರ್ಯಾಚರಣೆ ಅಧಿಕಾರಿ ಬಿ.ಕೆ. ಶಿವಕುಮಾರ್, ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಬಿ.ಕೆ. ಪವಿತ್ರ, ಕಾರ್ಯನಿರ್ವಾಹಕ ಎಂಜಿನಿಯರ್ ಸುನೀಲ್‌, ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸಪ್ಪ ರಾಜ್ಯದ ನಿಯೋಗದಲ್ಲಿದ್ದರು.

ಗುಜರಾತ್‌ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜೀವ್‌ ಕುಮಾರ್‌ ಗುಪ್ತಾ, ಮುಖ್ಯಮಂತ್ರಿಯವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ನಾಥನ್‌, ಕಾರ್ಯದರ್ಶಿ ಅಶ್ವಿನಿ ಕುಮಾರ್ ಮತ್ತು ಕೈಗಾರಿಕಾ ಅಭಿವೃದ್ಧಿ ಆಯುಕ್ತ ರಾಹುಲ್‌ ಗುಪ್ತಾ ಜತೆ ರಾಜ್ಯದ ನಿಯೋಗ ಸಭೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT