ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಒಡೆಯುವುದನ್ನು ಒಪ್ಪುವುದಿಲ್ಲ: ಈಶ್ವರಪ್ಪ

Last Updated 15 ಸೆಪ್ಟೆಂಬರ್ 2021, 17:36 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸಂಸ್ಕೃತಿ ನಂಬಿಕೊಂಡು ಇರುವ ಪಕ್ಷ. ರಾಜ್ಯದ ಯಾವುದೇ ದೇವಸ್ಥಾನ ಒಡೆಯುವುದನ್ನೂ ನಾನು ಒಪ್ಪುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್‌ ಆದೇಶಗಳು ಬೇಕಾದಷ್ಟಿವೆ. ಒಂದೇ ಒಂದು ದೇವಸ್ಥಾನ ಒಡೆದರೂ ತಪ್ಪು. ಮೈಸೂರಿನ ಘಟನೆಯಿಂದ ಇಡೀ ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನಗಳನ್ನು ಒಡೆದಿರುವುದು ಸರಿಯಲ್ಲ’ ಎಂದು ಹೇಳಿದರು.

ದೇವಸ್ಥಾನಗಳನ್ನು ಮಾತ್ರ ಜಿಲ್ಲಾಧಿಕಾರಿ ಏಕೆ ತೆರವು ಮಾಡಿಸಿದರು ಎಂಬ ಪ್ರಶ್ನೆ ಕಾಡುತ್ತಿದೆ. ಕಾಂಗ್ರೆಸ್‌ ನಾಯಕರು ಈ ವಿಚಾರದಲ್ಲಿ ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ದೇವಸ್ಥಾನಗಳನ್ನು ಉಳಿಸಬೇಕು ಎಂಬ ಭಾವನ ಈಗಲಾದರೂ ಅವರಲ್ಲಿ ಬಂದಿದೆಯಲ್ಲ, ಅದು ಮುಖ್ಯ ಎಂದು ಅವರು ಹೇಳಿದರು.

‘ಇಡೀ ರಾಜ್ಯದಲ್ಲಿ ಯಾರೂ ದೇವಸ್ಥಾನಗಳನ್ನು ಕೆಡವಲು ಹೋಗಬಾರದು. ಅಕ್ರಮ, ಅನಧಿಕೃತ ಎಂದು ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ. ಯಾವುದನ್ನೂ ಒಡೆಯಲು ಬಿಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಚರ್ಚಿಸಿ ಸೂಕ್ರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ಮಾನ ಉಳಿಸಿಕೊಳ್ಳಲು ಬಿಜೆಪಿ ಯತ್ನ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿರುವವರ ಗಮನಕ್ಕೆ ಬಾರದೇ ಮುಖ್ಯ ಕಾರ್ಯದರ್ಶಿಯವರು ದೇವಸ್ಥಾನಗಳ ತೆರವಿಗೆ ಆದೇಶ ನೀಡಿಲ್ಲ. ಈಗ ಬಿಜೆಪಿ ನಾಯಕರು ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅನಧಿಕೃತ ಧಾರ್ಮಿಕ ಕಟ್ಟಡಗಳ ನೆಲಸಮ ಕಾರ್ಯಾಚರಣೆ ತಿಂಗಳಿಂದ ನಡೆಯುತ್ತಿದೆ. ವಿರೋಧ ವ್ಯಕ್ತವಾಗು
ತ್ತಿದ್ದಂತೆಯೇ ರಾಜ್ಯ ಸರ್ಕಾರ ಬಣ್ಣ ಬದಲಾಯಿಸಿದೆ’ ಎಂದರು.

‘ಸರ್ಕಾರದ ಗಮನಕ್ಕೆ ಬಾರದೆ ದೇವಸ್ಥಾನ ಒಡೆದಿದ್ದಾರಾ? ಮೈಸೂರು ಸಂಸದರು ಈಗ ವಿರೋಧ ಮಾಡುತ್ತಿದ್ದಾರೆ. ಅದರ ಬದಲಿಗೆ ಸರ್ಕಾರದ ಜತೆ ಮಾತುಕತೆ ನಡೆಸಿ ದೇವಸ್ಥಾನ ಒಡೆಯುವುದನ್ನು ತಡೆಯಬಹುದಿತ್ತಲ್ಲವೆ’ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮಾತೆತ್ತಿದರೆ ಶ್ರೀರಾಮನ ಹೆಸರು ಹೇಳುತ್ತಾರೆ. ಈಗ ಅವರೇ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ಇದು ಬಿಜೆಪಿಯವರ ಢೋಂಗಿತನ ತೋರಿಸುತ್ತದೆ. ಹಿಂದುತ್ವ ಅವರಿಗೆ ರಾಜಕಾರಣಕ್ಕೆ ಮಾತ್ರ ಎಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.

‘ಸುಪ್ರೀಂಕೋರ್ಟ್‌ ಆದೇಶ ಬಂದು ಬಹಳ ವರ್ಷಗಳಾಗಿವೆ. ಇಷ್ಟು ದಿನ ಇವರು ಏನು ಮಾಡುತ್ತಾ ಇದ್ದರು. ಈಗ ಸಂಪುಟದಲ್ಲಿ ಚರ್ಚಿಸುತ್ತೇವೆ ಅನ್ನುವುದೂ ಢೋಂಗಿತನ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT