ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಬೈದಾಡಿಕೊಂಡ ಸಚಿವ ನಾರಾಯಣಗೌಡ, ಶಾಸಕ ಬೆಳ್ಳಿ ಪ್ರಕಾಶ್

ಶಾಸಕ– ಸಚಿವರ ‘ಮುಷ್ಟಿ’ ಯುದ್ಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿನ್ನಂತಹ ಅಸಮರ್ಥನನ್ನು ಮಂತ್ರಿ ಮಾಡಿದ್ದಾರಲ್ಲ, ಯಾವ ಕೆಲಸ ಮಾಡುವ ಯೋಗ್ಯತೆಯೂ ನಿನಗಿಲ್ಲ’- ಹೀಗೆಂದು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ ಅವರು ತೋಟಗಾರಿಕಾ ಸಚಿವ ನಾರಾಯಣಗೌಡ ಅವರತ್ತ ಮುಷ್ಟಿ ಬಿಗಿ ಹಿಡಿದು ನುಗ್ಗಿದರು. ಆಗ ಅಲ್ಲಿದ್ದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಾಯಕರು ‘ಭೀಮಗಾತ್ರ’ದ ಬೆಳ್ಳಿ ಪ್ರಕಾಶ್ ಅವರನ್ನು ತಡೆ ಹಿಡಿದು ‘ಅನಾಹುತ’ ಆಗುವುದನ್ನು ತಪ್ಪಿಸಿದರು.

ಈ ರೋಷಾವೇಶದ ದೃಶ್ಯವನ್ನು ಕಂಡು ಘಟಾನುಘಟಿ ನಾಯಕರೆಲ್ಲ ದಂಗಾಗಿ ಹೋದರು. ವಿಧಾನಸಭೆ ಅಧಿವೇಶನದ ಮೊದಲ ದಿನವೇ ಬೆಳ್ಳಿ ಪ್ರಕಾಶ್ ಮತ್ತು ನಾರಾಯಣಗೌಡ ಅವರ ನಡುವೆ ಕೈ–ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದ್ದು ವಿಧಾನಸಭೆಯ ಕ್ಯಾಂಟೀನ್‌ನಲ್ಲಿ.

ವಿಧಾನಸಭೆ ಮೊಗಸಾಲೆಯಲ್ಲಿದ್ದ ಕ್ಯಾಂಟೀನ್ ಅನ್ನು ಕೋವಿಡ್‌ ಕಾರಣದಿಂದಾಗಿ‌ ಮೊದಲ ಮಹಡಿಗೆ (ಹೈಕೋರ್ಟ್‌ ಕಡೆಯ ದ್ವಾರದ ಬಳಿ) ಸ್ಥಳಾಂತರ ಮಾಡಲಾಗಿದೆ. ಮಧ್ಯಾಹ್ನ 12 ರ ಹೊತ್ತಿಗೆ ಕ್ಯಾಂಟೀನ್‌ಗೆ ಬಂದಿದ್ದ ಸಚಿವ ನಾರಾಯಣಗೌಡ, ಮಂಡ್ಯ ಜಿಲ್ಲೆಯ ಶಾಸಕರ ಜತೆ ಟೀ ಕುಡಿಯಲು ಕುಳಿತಿದ್ದರು. ಅಲ್ಲಿಗೆ ಬಂದ ಬೆಳ್ಳಿ ಪ್ರಕಾಶ್,‌ ಸಚಿವರನ್ನು ನೋಡುತ್ತಲೇ, ಬೇಲೂರಿನ ತೋಟಗಾರಿಕೆ ಸಹಾಯಕ ನಿರ್ದೇಶಕಿಯನ್ನು ಕಡೂರಿಗೆ ವರ್ಗಾವಣೆ ಮಾಡಿಕೊಡಲು ಮುಖ್ಯಮಂತ್ರಿ ಅವರಿಂದ ಸಹಿ ಮಾಡಿಸಿ ಮನವಿ ಕೊಟ್ಟ ವಿಷಯ ‍ಪ್ರಸ್ತಾಪಿಸಿ, ‘ಏನಣ್ಣಾ, ನಾನು ಹೇಳಿದ ಕೆಲಸ ಏನಾಯಿತು. ಮಾಡಿಲ್ಲವೇ’ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಖಂಡಿತಾ ಮಾಡಿಕೊಡುತ್ತೇನೆ’ ಎಂದರು.

ಅಷ್ಟಕ್ಕೆ ಸುಮ್ಮನಾಗದ ಬೆಳ್ಳಿ ಪ್ರಕಾಶ್‌, ‘ನಾಲ್ಕ್‌ ತಿಂಗಳಿಂದ ಹೀಗೆ ಹೇಳ್ತಿದ್ದಿಯಲ್ಲಾ ಬಿಡಣ್ಣ, ಬೇರೆ ರಾಜ್ಯದಲ್ಲಾದರೆ ಶಾಸಕರಿಗೆ ಇರೋ ಕಿಮ್ಮತ್ತೇ ಬೇರೆ. ಇಲ್ಲಿ ನಾವೆಲ್ಲಾ ನಾಲಾಯಕ್‌ ಎಂಎಲ್‌ಎಗಳು’ ಎಂದು ಅಸಮಾಧಾನ ಹೊರ ಹಾಕಿದರು.

ಬೆಳ್ಳಿ ಪ್ರಕಾಶ್ ಅವರು‌ ತಮಗೇ ನಾಲಾಯಕ್ ಎಂಬುದಾಗಿ ಹೇಳಿದರೆಂದು ಭಾವಿಸಿದ ನಾರಾಯಣಗೌಡ ಅವರೂ ಸಿಟ್ಟಿಗೆದ್ದರು. ‘ನೀನು ಕಚೇರಿಗೆ ಬಂದು ಮಾತನಾಡು, ಇಲ್ಲಿ ಗದ್ದಲ ಎಬ್ಬಿಸಬೇಕಿಲ್ಲ’ ಎಂದು ಗದರಿದರು. ಕ್ರಮೇಣ ಇಬ್ಬರ ನಡುವಿನ ಸಂಭಾಷಣೆ ಏಕವಚನಕ್ಕೆ ತಿರುಗಿತು, ಬೈಯ್ದಾಟವೂ ಆರಂಭವಾಯಿತು.

‘ಶಾಸಕರ ಕ್ಷೇತ್ರದ ಕೆಲಸಗಳನ್ನು ಮಾಡಿ ಕೊಡದ ನೀನೆಂತಹ ಸಚಿವ. ನಾನೇಕೆ ನಿನ್ನ ಕಚೇರಿಗೆ ಬರಲಿ’ ಎಂದು ಬೆಳ್ಳಿ ಪ್ರಕಾಶ್‌ ಅಬ್ಬರಿಸಿದರು. ಈ ಸಂದರ್ಭದಲ್ಲಿ ಅವರು ಅವಾಚ್ಯ ಪದವೊಂದನ್ನು ಬಳಸಿದರೆಂದು ಪ್ರತ್ಯಕ್ಷದರ್ಶಿ ಶಾಸಕರೊಬ್ಬರು ತಿಳಿಸಿದರು.

ಹೀಗೆ ಇಬ್ಬರೂ ಕೂಗಾಡುತ್ತಾ, ಅಲ್ಲಿದ್ದ ಕುರ್ಚಿಗಳನ್ನು ಎಳೆದಾಡಿದರು. ಈ ಹಂತದಲ್ಲಿ ಬೆಳ್ಳಿ ಪ್ರಕಾಶ್‌ ಮುಷ್ಟಿ ಪ್ರಹಾರ ಮಾಡಲು ಹೋದರು. ಅಲ್ಲಿದ್ದ ಮುಖ್ಯ ಸಚೇತಕ ಸುನಿಲ್ ಕುಮಾರ್‌ ಮತ್ತು ಜೆಡಿಎಸ್‌ ಶಾಸಕ ಡಾ. ಕೆ. ಅನ್ನದಾನಿ ಜಗಳ ಬಿಡಿಸಿದರು. ಇಷ್ಟಕ್ಕೂ ಸುಮ್ಮನಾಗದೇ ಇಬ್ಬರೂ ಮಾತಿನ ಚಕಮಕಿ ಮುಂದುವರಿಸಿದರು. ಆಗ ಕ್ಯಾಂಟೀನ್‌ನಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಸಚಿವರಾದ ಕೆ.ಎಸ್‌.ಈಶ್ವರಪ್ಪ, ವಿ.ಸೋಮಣ್ಣ, ಸಿ.ಟಿ.ರವಿ, ಕಾಂಗ್ರೆಸ್‌ ಶಾಸಕ ಸತೀಶ‌ ಜಾರಕಿಹೊಳಿ ಮುಂತಾ ದವರು ಇದನ್ನು ನೋಡಿ ದಂಗಾದರು.

ಈ ಹಂತದಲ್ಲಿ ಸಿದ್ದರಾಮಯ್ಯ ಅವರು ಸಚಿವ ನಾರಾಯಣಗೌಡ ಅವರನ್ನು ಕರೆದು, ‘ಏನಯ್ಯ ಮಿನಿಸ್ಟ್ರಾಗಿ ಹೀಗೆಲ್ಲ ಮಾಡೋದಾ’ ಎಂದರು. ‘ಇಲ್ಲ ಸಾರ್‌, ನನಗೆ ಕೆಟ್ಟಭಾಷೆಯಲ್ಲಿ ಬೈಯ್ದದನ್ನು ಕೇಳಿಕೊಂಡು ಸುಮ್ಮನೆ ಇರಲು ಆಗತ್ತಾ. ಮಾತನಾಡಬೇಕಾದರೆ ಒಂದು ಮರ್ಯಾದೆ ಇರಬೇಕಲ್ಲ‌’ ಎಂದು ನಾರಾಯಣಗೌಡ ದುಗುಡ ತೋಡಿಕೊಂಡರು.

ಈ ಜಟಾಪಟಿಯ ವಿಷಯ ಮುಖ್ಯಮಂತ್ರಿಯವರ ಕಿವಿಗೂ ಬಿದ್ದಿದೆ.

‘ಜನ ನಮ್ಮನ್ನು ನೋಡ್ತಾ ಇರ್ತಾರೆ ಎಚ್ಚರಿಕೆ’
‘ಶಾಸಕ ಬೆಳ್ಳಿ ಪ್ರಕಾಶ್‌ ಅವರು ಸಚಿವ ನಾರಾಯಣಗೌಡ ಮೇಲೆ ಕೂಗಾಡ್ತಾ ಇದ್ದರು. ಸಚಿವರಾಗಲಿ, ಶಾಸಕರಾಗಲಿ, ಸೌಜನ್ಯದಿಂದ ನಡೆದುಕೊಳ್ಳಬೇಕು. ಆರು ಕೋಟಿ ಜನ ನಮ್ಮನ್ನು ನೋಡ್ತಾ ಇರುತ್ತಾರೆ. ಸಾರ್ವಜನಿಕವಾಗಿ ಗಲಾಟೆ ಮಾಡಿಕೊಂಡರೆ ತಪ್ಪು. ನಾನೇ ಅವರನ್ನು ಕರೆದು ಸಮಾಧಾನ ಮಾಡಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಕೆಟ್ಟ ಪದ ಬಳಕೆಯಿಂದ ಬೇಸರ ಆಯಿತು’
‘ವರ್ಗಾವಣೆ ವಿಚಾರ ಪ್ರಸ್ತಾಪಿಸಿದರು. ಅಣ್ಣ, ಬನ್ನಿ ಮಾತಾಡೋಣ ಎಂದೆ. ಅವರು ಏಕವಚನದಲ್ಲಿ ಕೆಟ್ಟ ಪದ ಬಳಸಿ ಮಾತನಾಡಿದರು. ನನಗೆ ಆ ಭಾಷೆ ಬರಲ್ಲ. ನನಗೂ ಬೇಜಾರಾಯಿತು. ಯಾರ ಬಳಿಯೂ ರಫ್‌ ಆಗಿ ಮಾತನಾಡಬಾರದು. ಗಲಾಟೆ ಏನೂ ಆಗಿಲ್ಲ. ನನ್ನ ಮೇಲೆ ಯಾರೂ ಮುಷ್ಟಿ ಪ್ರಹಾರ ಮಾಡಿಲ್ಲ’ ಎಂದು ಸಚಿವ ನಾರಾಯಣ ಗೌಡ ಸಮಜಾಯಿಷಿ ನೀಡಿದರು.

‘ನಾನು ಪಂಚ್‌ ಕೊಟ್ಟಿಲ್ಲ’
‘ನಾನೂ ಉಪ್ಪು, ಹುಳಿ, ಖಾರ ತಿಂದವನೇ, ಯಾವುದೇ ಪಂಚ್‌ ಕೊಟ್ಟಿಲ್ಲ. ಅವರು ಏಕವಚನದಲ್ಲಿ ಹೋಗಯ್ಯ ಅಂದರು. ನಾನೂ ಕೂಡ ನನ್ನ ಭಾಷೆಯಲ್ಲಿ ಏಕವಚನ ಬಳಸಿದೆ. ಎರಡು ತಿಂಗಳಿಂದ ಕೆಲಸ ಆಗಿಲ್ಲ ಅಂದ್ರೆ ಹೇಗೆ? ಇನ್ನು ಮುಂದೆ ನಾರಾಯಣಗೌಡರ ಬಳಿ ಯಾವುದೇ ಕೆಲಸ ತೆಗೆದುಕೊಂಡು ಹೋಗಲ್ಲ’ ಎಂದು ಬೆಳ್ಳಿ ಪ್ರಕಾಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು