ಬುಧವಾರ, ಸೆಪ್ಟೆಂಬರ್ 29, 2021
20 °C

ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ಸುತ್ತ ಸಚಿವಾಕಾಂಕ್ಷಿಗಳ ಗಿರಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ಬುಧವಾರ ಬೆಳಿಗ್ಗೆ 8 ಗಂಟೆಗೆ ನಗರದ ಬಾಲಬ್ರೂಯಿ ಅತಿಥಿಗೃಹದ ಬಳಿಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ‘ರಾಜ್ಯದ ಜನರಿಗೆ ಒಳ್ಳೆಯದಾಗಬೇಕು’‌ ಎಂದು ದೇವರ ದರ್ಶನಕ್ಕೆ ಬಂದಿದ್ದೇನೆ’ ಎಂದರು. ಜತೆಗೆ, ಶಾಸಕ ಬೈರತಿ ಬಸವರಾಜ್‌ ಕೂಡಾ ಇದ್ದರು. ಅದೇ ವೇಳೆ ದೇವಸ್ಥಾನಕ್ಕೆ ಹೂ ಗುಚ್ಛ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ‘ದೇವರ ಮಂತ್ರಿಗಳು’ ಎಂದು ಬೊಮ್ಮಾಯಿ ಕರೆದರು.

ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ಬೊಮ್ಮಾಯಿ, ಅಲ್ಲಿಂದ ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ಕಾವೇರಿ’ ಹೋದರು. ಅದಾಗಲೇ ಕಾವೇರಿಯಲ್ಲಿದ್ದ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಸುತ್ತ ಸಚಿವ ಸ್ಥಾನ ಆಕಾಂಕ್ಷಿಗಳು ಗಿರಕಿ ಹೊಡೆಯುತ್ತಿದ್ದರು. ಯಡಿಯೂರಪ್ಪ ಅವರೇ ‘ಸುಪ್ರೀಂ’ ಎಂದುಕೊಂಡಿರುವ ಮಾಜಿ ಸಚಿವರು, ಶಾಸಕರು, ಯಡಿಯೂರಪ್ಪ ಬಳಿ ಮಾತನಾಡಿ ಹೋಗುತ್ತಿದ್ದರು.

ಕುಮಟಾ ಶಾಸಕ ದಿನಕರ ಶೆಟ್ಟಿ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿರೂಪಾಕ್ಷ ಬಳ್ಳಾರಿ, ತಿಪ್ಪಾರೆಡ್ಡಿ, ಆರ್‌. ಅಶೋಕ, ಬೈರತಿ ಬಸವರಾಜ್‌, ಪ್ರಭು ಚವ್ಹಾಣ, ಗೋವಿಂದ ಕಾರಜೋಳ, ಎಸ್‌.ಟಿ. ಸೋಮಶೇಖರ್‌ ಹೀಗೆ ಹಲವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ಯಡಿಯೂರಪ್ಪ ಜೊತೆ ಕೆಲಹೊತ್ತು ಚರ್ಚಿಸಿದ ಬಳಿಕ, ಬೊಮ್ಮಾಯಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತು ಕೇಂದ್ರದಿಂದ ಬಂದಿದ್ದ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್‌ ಮತ್ತು ಕಿಷನ್‌ ರೆಡ್ಡಿ ಅವರನ್ನು ಭೇಟಿ ಮಾಡಲು ಕುಮಾರಕೃಪಾ ಅತಿಥಿಗೃಹಕ್ಕೆ ಹೋದರು. ಅಲ್ಲಿಯೂ ಸಚಿವಾಕಾಂಕ್ಷಿ ಮಾಜಿ ಸಚಿವರೂ, ಶಾಸಕರ ದಂಡು ಇತ್ತು. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ತಿಪ್ಪಾರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಎಸ್.ಟಿ,  ಸೋಮಶೇಖರ್, ಡಾ.ಕೆ. ಸುಧಾಕರ್ ಹೀಗೆ ಒಬ್ಬೊಬ್ಬರೇ ಬಂದರು. ಆ ಮೂಲಕ, ಅತಿಥಿಗೃಹ ಕೆಲಹೊತ್ತು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಬದಲಾಯಿತು. ಸಂಸದರಾದ ಜಿ.ಎಂ ಸಿದ್ದೇಶ್ವರ, ತೇಜಸ್ವಿ ಸೂರ್ಯ, ಶಿವಕುಮಾರ ಉದಾಸಿ, ಮುನಿಸ್ವಾಮಿ ಕೂಡಾ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು