ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಪುನರಾರಂಭದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ: ಸುರೇಶ್ ಕುಮಾರ್

Last Updated 4 ನವೆಂಬರ್ 2020, 7:59 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಈ ಕ್ಷಣದವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇನ್ನೂ ಎರಡು ದಿನ ಸಭೆ ನಡೆಸುತ್ತೇವೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿನ ಸ್ಥಿತಿಗತಿಯ ಬಗ್ಗೆಯೂ ಅಧ್ಯಯನ ಮಾಡುತ್ತೇವೆ. ರಾಜ್ಯದಲ್ಲಿರುವ ವಸತಿ ಶಾಲೆಯವರ ಜೊತೆ ಇಲಾಖೆಯ ಆಯುಕ್ತರು ಚರ್ಚೆ ನಡೆಸಲಿದ್ದಾರೆ’ ಎಂದರು.

‘ಸಭೆಯ ಬಳಿಕ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗೆ ವರದಿ ಸಲ್ಲಿಸುತ್ತೇವೆ. ಆ ಬಳಿಕ ಅಂತಿಮ ಹಂತಕ್ಕೆ ಬರುತ್ತೇವೆ’ ಎಂದೂ ಸ್ಪಷ್ಟಪಡಿಸಿದರು.

‘ಶಾಲೆಗಳನ್ನು ಆರಂಭಿಸುವ ಕುರಿತು ಶಿಕ್ಷಕರ ಸಂಘಗಳ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿದ್ದೇವೆ. ಮೈಸೂರು ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರಿನ ಖಾಸಗಿ ಶಾಲೆಗಳ ಪ್ರತಿನಿಧಿಗಳು ಕೂಡಾ ಶಾಲೆಗಳನ್ನು ಆರಂಭಿಸುವ ಕುರಿತುಗ ಸಭೆ ನಡೆಸುತ್ತಿದ್ದಾರೆ. ಅವರ ಅಭಿಪ್ರಾಯವನ್ನೂ ಸ್ವೀಕರಿಸುತ್ತೇವೆ. ಎಲ್ಲ ಬೆಳವಣಿಗೆಗಳನ್ನು ಮುಖ್ಯಮಂತ್ರಿಗೆ ತಿಳಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದೂ ಸುರೇಶ್‌ ಕುಮಾರ್‌ ಹೇಳಿದರು.

‘ಈಗಾಗಾಲೇ ಶಾಲಾ ಅಭಿವೃದ್ಧಿ ಸಮಿತಿಗಳ (ಎಸ್‌ಡಿಎಂಸಿ) ರಾಜ್ಯ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಗಳ ಜೊತೆಗೂ ಈ ಬಗ್ಗೆ ಚರ್ಚೆ ಮಾಡುತ್ತವೆ. ಪ್ರತಿ ತಾಲ್ಲೂಕುಗಳಿಂದ ಎರಡು ಎಸ್‌ಡಿಎಂಸಿಗಳ ಪ್ರತಿನಿಧಿಗಳ ಜೊತೆ ಆಯುಕ್ತರು ಮಾತುಕತೆ ನಡೆಸಲಿದ್ದಾರೆ’ ಎಂದೂ ಸಚಿವರು ಹೇಳಿದರು.

ಸಭೆಯಲ್ಲಿದ್ದ ಅಧಿಕಾರಿಗಳು ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸಲಹೆ ನೀಡಿದ್ದಾರೆ ಎಂದೂ ಗೊತ್ತಾಗಿದೆ. ಮೊದಲ ಹಂತದಲ್ಲಿ 8ರಿಂದ 12ರವರೆಗಿನ ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ಚುನಾವಣಾ ನೀತಿಸಂಹಿತೆ ಮುಗಿದ ನಂತರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ
ಬೆಂಗಳೂರು:
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಹೇಳಿದರು.

‘ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಾರಂಭಕ್ಕೂ ಮುನ್ನ, ಅರ್ಹ ಉಪನ್ಯಾಸಕರಿಗೆ ಪ್ರಾಚಾರ್ಯ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT