ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಭ್ರಷ್ಟಾಚಾರದ ಆರೋಪಕ್ಕೆ ಒಳಗಾದರೆ ಪಕ್ಷ ಸಹಿಸಲ್ಲ: ನಳಿನ್‌ ಕುಮಾರ್‌ ಕಟೀಲ್

ಪ್ರತಿ ತಿಂಗಳು ಸಚಿವರ ಮೌಲ್ಯ ಮಾಪನ: ನಳಿನ್‌ ಕುಮಾರ್‌ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಚಿವರ ಕಾರ್ಯನಿರ್ವಹಣೆಯನ್ನು ಪ್ರತಿ ತಿಂಗಳು ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು.

ಭ್ರಷ್ಟಾಚಾರ ಮತ್ತು ಇತರ ಯಾವುದೇ ಆರೋಪಗಳಿಗೆ ಒಳಗಾಗುವ ಸಚಿವರನ್ನು ಪಕ್ಷ ಸಹಿಸುವುದಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಚಿವರ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಪರಾಮರ್ಶೆ ಮಾಡುತ್ತೇವೆ. ಜನತೆ ಮತ್ತು ಕಾರ್ಯಕರ್ತರ ಪ್ರತಿಕ್ರಿಯೆಯನ್ನು ಅವರಿಗೆ ತಿಳಿಸಿ, ಆ ಕೆಲಸಗಳನ್ನು ಮಾಡಿಸುವ ನಿಟ್ಟಿನಲ್ಲಿ ಪಕ್ಷ ಸಚಿವರ ಬೆನ್ನು ಬೀಳಲಿದೆ’ ಎಂದು ಕಟೀಲ್‌ ಹೇಳಿದರು.

‘ನೂತನ ಸಚಿವರು ಅಭಿನಂದನೆ, ಸನ್ಮಾನಗಳನ್ನು ನಿಲ್ಲಿಸಬೇಕು. ಸಂಕಷ್ಟದ ಈ ಸಂದರ್ಭದಲ್ಲಿ ಪಕ್ಷ ಮತ್ತು ಸರ್ಕಾರದ ಗೌರವ ಉಳಿಸುವ ಕೆಲಸ ಮಾಡಬೇಕು. ಕೋವಿಡ್‌, ಪ್ರವಾಹ, ಭೂಕುಸಿತದಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಅಲ್ಲಿಗೆ ಹೋಗಿ ಅವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು’ ಎಂದೂ ಸೂಚಿಸಿದರು.

ಸಂಘ ನಿಷ್ಠರಿಗೆ ಆದ್ಯತೆ ನೀಡಿಲ್ಲ ಎಂದು ಕೇಳಿಬಂದ ಟೀಕೆಗೆ, ‘ಅನಿವಾರ್ಯ ಸಂದರ್ಭದಲ್ಲಿ ತ್ಯಾಗ ಮಾಡಿ ಬಂದವರಿಗೆ ಗೌರವ ನೀಡಿ, ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಕಾರಣದಿಂದ ಹೆಚ್ಚು ಸಚಿವ ಸ್ಥಾನಗಳನ್ನು ಕೊಟ್ಟಿದ್ದೇವೆ’ ಎಂದರು.

‘ನಮ್ಮ ವಿಚಾರದ ಬದ್ಧತೆ ಇದ್ದವರಿಗೂ ಅವಕಾಶ ನೀಡಿದ್ದೇವೆ. ಆರಗ ಜ್ಞಾನೇಂದ್ರ, ಸುನಿಲ್‌ಕುಮಾರ್, ಹಾಲಪ್ಪ ಆಚಾರ್‌ ಮತ್ತು ಬಿ.ಸಿ.ನಾಗೇಶ್ ಅವರಿಗೆ ಅವಕಾಶ ನೀಡಿದ್ದೇವೆ. ಹೊರಗಿನಿಂದ ಬಂದವರು ಮತ್ತು ಬಿಜೆಪಿ ಮೂಲದವರ ಮಧ್ಯೆ ಸಮತೋಲನ ಮಾಡಿದ್ದೇವೆ’ ಎಂದರು.

‘ಎಲ್ಲರಿಗೂ ಒಳ್ಳೆಯ ಖಾತೆಗಳನ್ನೇ ಹಂಚಿದ್ದೇವೆ. ಉತ್ತಮ ಕೆಲಸ ಮಾಡುವ ಮೂಲಕ ಸಚಿವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಸಂಘದ ಮೂಲದವರಿಗೆ ಆದ್ಯತೆ ನೀಡಿಲ್ಲ ಎಂಬ ಮಾತು ಸರಿಯಲ್ಲ’ ಎಂದು ಕಟೀಲ್‌ ತಿಳಿಸಿದರು. ‘ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಅವುಗಳನ್ನು ಜನರನ್ನು ತಲುಪಿಸಲು ಸಾಧ್ಯವಾಗಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಮಾಡಿರುವ ಕೆಲಸಗಳನ್ನು ನಾವು ಸರ್ಕಾರದ ಮುಖವಾಣಿಯಾಗಿ ಜನರ ಬಳಿ ಒಯ್ಯುತ್ತೇವೆ’ ಎಂದರು.

ಪಕ್ಷದ ಸಂಘಟನೆಯನ್ನು ಬಲ ಪಡಿಸಲು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ವಿಧಾನ ಪರಿಷತ್‌ ಚುನಾವಣೆ, ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಸಜ್ಜಾಗಲು ಇದೇ ತಿಂಗಳಿನಿಂದ ಸಂಘಟನಾತ್ಮಕ ಸರಣಿ ಸಭೆ, ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ ಶಕ್ತಿ ಸಂಪೂರ್ಣ ಬಳಕೆ: ಮುಂಬರುವ ಎಲ್ಲ ಚುನಾವಣೆಗಳಲ್ಲೂ ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಎಂದು ನಳಿನ್ ತಿಳಿಸಿದರು.

ಅಲ್ಲದೆ, ಗಣೇಶ ಹಬ್ಬದ ಬಳಿಕ ಅವರು ನಡೆಸಲು ಉದ್ದೇಶಿಸಿರುವ ಯಾತ್ರೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಮುಂದಿನ ಜನವರಿಯಿಂದ ವಿಧಾನ ಸಭಾ ಚುನಾವಣೆ ದೃಷ್ಟಿಯಿಂದ 1 ವರ್ಷಗಳ ಕಾಲ ದೊಡ್ಡ ಸಮಾವೇಶಗಳನ್ನು ನಡೆಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು