ಬುಧವಾರ, ಏಪ್ರಿಲ್ 21, 2021
32 °C

ಹೆಸರು, ಉದ್ದು ಖರೀದಿ ಕೇಂದ್ರ ಸ್ಥಾಪನೆಗೆ ಪ್ರಿಯಾಂಕ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಹೆಸರು ಹಾಗೂ ಉದ್ದು ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ರೈತರಿಂದ ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲು ಖರೀದಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೃಷಿ‌ ಸಚಿವ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ 63,707ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ 34,954 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಲಾಗಿತ್ತು. ಈಗಾಗಲೇ ಕಟಾವು ಮಾಡಿದ ರೈತರು ಧಾನ್ಯಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಧಾರಣೆ ಇಳಿಮುಖವಾಗಿದ್ದು ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರದ ಆದೇಶದಂತೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹಾಗೂ ಉದ್ದು ಖರೀದಿಸುವಂತೆ ಒತ್ತಾಯಿಸಿದ್ದಾರೆ.

ಪೂರ್ವಭಾವಿ ಪರೀಕ್ಷೆ ಮುಂದೂಡಿ: ಕೊವೀಡ್–19 ರೋಗ ಇನ್ನೂ ರಾಜ್ಯದಲ್ಲಿ ತನ್ನ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಲೋಕಸೇವಾ ಆಯೋಗವು 2017–18ರ ಸಾಲಿನ 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಆದರೆ, ಕೋವಿಡ್ ಸೋಂಕಿನಿಂದ ಜನ ಜೀವನ ತಲ್ಲಣಗೊಳ್ಳುವಂತೆ ಮಾಡಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು ಎಂದು ಆತಂಕಕ್ಕೊಳಗಾಗಿದ್ದಾರೆ. ಆದ್ದರಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಶಾಸಕ ಪ್ರಿಯಾಂಕ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸೋಂಕಿನಿಂದ ಬಳಲುತ್ತಿರುವವರು ಹಾಗೂ ಹೋಂ ಕ್ವಾರಂಟನ್‌ನಲ್ಲಿ‌ ಇರುವವರು ಪರೀಕ್ಷೆ ಎದುರಿಸುವುದು ತೊಂದರೆಯಾಗುತ್ತದೆ. ಜೊತೆಗೆ ಪರೀಕ್ಷೆಗೆ ಹಾಜರಾಗುವವರನ್ನು ರ‍್ಯಾಪಿಡ್ ಟೆಸ್ಟ್ ಮಾಡಿಸಲಾಗುತ್ತಿದೆ ಎನ್ನುವ ಮಾಹಿತಿಗಳಿವೆ. ಹಾಗೆ ಟೆಸ್ಟ್ ಗೆ ಒಳಗಾದ ಅಭ್ಯರ್ಥಿಗಳಿಗೆ ಸೋಂಕು ದೃಢಪಟ್ಟರೆ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅಂತಹ ಅಭ್ಯರ್ಥಿಗಳಿಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆಯಾ? ಅಥವಾ ಅಭ್ಯರ್ಥಿಗಳು ಗೈರು ಎಂದು ಅನರ್ಹಗೊಳಿಸಲಾಗುತ್ತದೆಯಾ? ಈ‌ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

ಭವಿಷ್ಯಕ್ಕಾಗಿ‌ ಕಷ್ಟಪಟ್ಟು ಅಭ್ಯಾಸ ಮಾಡಿರುವ ಅಭ್ಯರ್ಥಿಗಳ ಕುರಿತು ಕಾಳಜಿ ವಹಿಸದೇ ಹೇಗೆ ಪರೀಕ್ಷೆ ನಡೆಸುವ ತೀರ್ಮಾನ‌ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿರುವ ಪ್ರಿಯಾಂಕ್, ಯಾವ ಪೂರ್ವಾಪರ ಯೋಚನೆ ಮಾಡದೇ ಪರೀಕ್ಷೆ ನಡೆಸಲು ಉದ್ದೇಶಿಸಿರುವುದರ ಹಿಂದೆ ಸರ್ಕಾರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು