ಶುಕ್ರವಾರ, ಮೇ 27, 2022
21 °C
ಸಚಿವ ಎಸ್‌ಟಿ ಸೋಮಶೇಖರ್‌ ಅಪಪ್ರಚಾರ: ಕೆಜಿಎಫ್‌ ಬಾಬು ಅಳಲು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಬಾಬು

ಪತ್ನಿಯರ ಜತೆ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಕೆಜಿಎಫ್‌ ಬಾಬು: ಕಾರಣ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಗೆ ಬೆಂಗಳೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯುಸೂಫ್‌ ಷರೀಫ್‌ (ಕೆಜಿಎಫ್‌ ಬಾಬು) ತಮ್ಮ ಇಬ್ಬರು ಪತ್ನಿಯರು ಮತ್ತು ಮಕ್ಕಳ ಜತೆ ಸುದ್ದಿಗೋಷ್ಠಿ ನಡೆಸಿ, ತಮ್ಮ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್‌ ಅಪಪ್ರಚಾರ ನಡೆಸಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಯುಸೂಫ್‌ ಷರೀಫ್‌ ಅವರು, ‘ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂಬುದು ಸುಳ್ಳು. ಬಿಲ್ಡರ್‌ ನವೀದ್‌ ಎಂಬುವನ ಚಿತಾವಣೆಯಿಂದ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದರು.

‘ನನಗೆ ಪತ್ನಿ ಮತ್ತು ನನ್ನ ಮಗಳು ಎಂದರೆ ಪ್ರಾಣ. ನವೀದ್‌ ₹300 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದ. ಆದರೆ ಆತ ₹6 ಲಕ್ಷ ಕೊಟ್ಟು ಉಳಿದ ಹಣವನ್ನು ಕೊಡದೇ ಮೋಸ ಮಾಡಿದ್ದ. ಈ ಸಂಬಂಧ ನಮ್ಮಿಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಆತ ನನ್ನ ಹೆಂಡತಿಯ ಬ್ರೈನ್‌ವಾಶ್‌ ಮಾಡಿ, ಹೆಂಡತಿ ಮತ್ತು ಮಗಳನ್ನು ಅಪಹರಣ ಮಾಡಿದ್ದ’ ಎಂದು ಹೇಳಿದರು.

‘ಹೆಂಡತಿ ಮತ್ತು ಮಗಳನ್ನು ಮೈಸೂರು, ಬೆಂಗಳೂರು, ತಮಿಳುನಾಡಿನಲ್ಲಿ ಸುಮಾರು ಆರು ತಿಂಗಳು ಬಚ್ಚಿಟ್ಟಿದ್ದ. ನನ್ನ ಹಣವನ್ನು ಹೊಡೆಯಲು ಈ ಕೃತ್ಯ ಮಾಡಿದ್ದ. ನನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್‌ ಹಾಕಿಸಿದರು. ₹1,000 ಕೋಟಿ ಪರಿಹಾರ ಕೇಳಿದರು. ಹೆಂಡತಿಗೆ ಬುದ್ದಿವಾದ ಹೇಳಿದೆ. ಬಳಿಕ ಹೆಂಡತಿ ಪ್ರಕರಣವನ್ನು ಹಿಂದಕ್ಕೆ ಪಡೆದಳು. ಇವೆಲ್ಲ ಮಾಡಿಸಿದ್ದು ನವೀದ್‌’ ಎಂದು ಯುಸೂಫ್‌ ಕಣ್ಣೀರು ಹಾಕಿದರು.


ಕೆಜಿಎಫ್ ಬಾಬು

ಯುಸೂಫ್‌ ಮೊದಲ ಪತ್ನಿ ರುಕ್ಸಾನ ಮಾತನಾಡಿ, ‘ಯಾರ ಮನೆಯಲ್ಲಿ ಜಗಳ ಆಗುವುದಿಲ್ಲ ಹೇಳಿ. ನಮ್ಮ ಮನೆಯಲ್ಲೂ ಜಗಳ ಆಗಿತ್ತು. ಗಂಡನ ವಿರುದ್ಧ ನನ್ನ ಕೈಯಿಂದಲೇ ಕೇಸ್‌ ಹಾಕಿಸಿದರು. ಬಳಿಕ ನಾವಿಬ್ಬರೂ ಮಾತನಾಡಿಕೊಂಡು ಕೇಸ್‌ ವಾಪಸ್‌ ಪಡೆದೆವು. ನನ್ನ ಗಂಡ ದೇವರ ಸಮಾನ. ನನ್ನ ಗಂಡನಿಗೆ ಸಮಸ್ಯೆ ಮಾಡಲು ಹೊರಟ್ಟಿದ್ದರು. ಸಂಸಾರದ ವಿಚಾರ ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ’ ಎಂದು ಹೇಳಿದರು.

ಯುಸೂಫ್‌ ಎರಡನೇ ಪತ್ನಿ ಶಾಜಿಯಾ ಮಾತನಾಡಿ, ‘ಸಚಿವರ ಹೇಳಿಕೆ ಸರಿ ಇಲ್ಲ. ಎಲ್ಲರ ಮನೆಯಲ್ಲೂ ಗಂಡ–ಹೆಂಡಿರ ಜಗಳ ಆಗುತ್ತದೆ, ನಿಮ್ಮ ಮನೆಯಲ್ಲಿ ಆಗುವುದಿಲ್ಲವೇ’ ಎಂದು ಸೋಮಶೇಖರ್ ಅವರನ್ನು ಪ್ರಶ್ನಿಸಿದರು. ‘ಚುನಾವಣೆಯಲ್ಲಿ ನನ್ನ ಗಂಡ ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಅಪಪ್ರಚಾರ ನಡೆಸಲಾಗುತ್ತಿದೆ. ಸಚಿವರಿಗೆ ದಾಖಲೆ ಕೊಟ್ಟಿದ್ದೇ ನವೀದ್‌’ ಎಂದು ಕಿಡಿಕಾರಿದರು.

ಯುಸೂಫ್ ಪುತ್ರಿ ಮಾತನಾಡಿ, ‘ನನ್ನ ತಂದೆಯ ಮೇಲೆ ವೃಥಾ ಆರೋಪ ಮಾಡಿದ್ದಾರೆ. ನಮ್ಮ ತಂದೆ ತುಂಬಾ ಒಳ್ಳೆಯವರು. ಅತ್ಯಾಚಾರಕ್ಕೆ ಯತ್ನಿಸಿದರು ಎಂಬ ಆರೋಪದಿಂದ ನೋವಾಗಿದೆ. ಸಚಿವರು ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದರು.

ಇದನ್ನೂ ಓದಿ: ಕೆಜಿಎಫ್‌ ಬಾಬು ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಇದೆ: ಎಸ್‌ಟಿ ಸೋಮಶೇಖರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು