ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಬಯಸದ ಆಧುನಿಕ ಮಹಿಳೆ: ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ

Last Updated 10 ಅಕ್ಟೋಬರ್ 2021, 15:11 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿನ ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಆಲೋಚನೆಗಳಲ್ಲಿನ ಇಂತಹ ಬದಲಾವಣೆ ಸರಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ಹಾದಿಯಲ್ಲಿ ಸಾಗುತ್ತಿರುವ ನಾವು, ತಂದೆ–ತಾಯಿಯ ಜೊತೆಗೆ ಇರಲೂ ಇಷ್ಟಪಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾನಸಿಕ ಆರೋಗ್ಯ ಹೊಂದಿಲ್ಲದ ವ್ಯಕ್ತಿ ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ದೇಶದಲ್ಲಿ ಪ್ರತಿ ಏಳು ಮಂದಿಯಲ್ಲಿ ಒಬ್ಬರು ವಿವಿಧ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ

‘ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾಗಿದ್ದೇವೆ. ಐಟಿ, ಕೃಷಿ ಸೇರಿದಂತೆ ಪ್ರತಿ ವೃತ್ತಿಯಲ್ಲೂ ಜನ ಒತ್ತಡಗಳನ್ನು ಎದುರಿಸುತ್ತಾರೆ. ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿರುವ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅದ್ಭುತವಾದ ಸಾಧನಗಳು. ಪ್ರತಿ ಮಾನಸಿಕ ಸಮಸ್ಯೆಗೂ ನಮ್ಮಲ್ಲಿ ಚಿಕಿತ್ಸೆ ಇದೆ’ ಎಂದರು.

‘ದೇಶದಲ್ಲಿ ಒತ್ತಡ, ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮನೋವೈದ್ಯರ ಬಳಿಗೆ ಬರಲು ಹಿಂಜರಿಯುತ್ತಾರೆ. ಆದರೆ, ವಿದೇಶಗಳಲ್ಲಿ ಈ ರೀತಿಯ ಸಮಸ್ಯೆ ಎದುರಾದರೆ, ಕೂಡಲೇ ಮನೋವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುತ್ತಾರೆ. ದೇಶದ ಜನ ಹಿಂಜರಿಕೆ ಮನೋಭಾವವನ್ನು ದೂರ ಇಡಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ,‘ಮಾನಸಿಕ ಆರೋಗ್ಯ ಪ್ರಕರಣಗಳ ಇತ್ತೀಚಿನ ಏರಿಕೆಗೆ ನಮ್ಮ ಜೀವನಶೈಲಿ ಮತ್ತು ಕುಟುಂಬ ರಚನೆಯಲ್ಲಿನ ಬದಲಾವಣೆ ಪ್ರಮುಖ ಕಾರಣ. ಮಾನಸಿಕ ಆರೋಗ್ಯ ಸಮಸ್ಯೆಗಳು ಮಧುಮೇಹದಂತೆ ನಿಧಾನವಾಗಿ ಕೊಲ್ಲುವ ಕೊಲೆಗಾರ’ ಎಂದು ಅವರು ಎಚ್ಚರಿಸಿದರು.

‘ಮಾನಸಿಕ ಆರೋಗ್ಯ ಸಂಬಂಧ ದೇಶದಲ್ಲಿ ಸಂಶೋಧನೆಗಳು ಹೆಚ್ಚಾಗಿ ನಡೆಯಬೇಕಿದೆ. ಸಂಶೋಧನೆಗಳೊಂದಿಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳನ್ನು ತರಬಹುದು’ ಎಂದೂ ಹೇಳಿದರು.

‘ತಂಬಾಕು ಬಿಟ್ಟುಬಿಡಿ..ಹೀರೋ ಆಗಿ’ ಜಾಗೃತಿ ಅಭಿಯಾನಕ್ಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ನಿಮ್ಹಾನ್ಸ್‌ ನಿರ್ದೇಶಕಿ ಪ್ರತಿಮಾ ಮೂರ್ತಿ ಹಾಗೂ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT