ಮಂಗಳವಾರ, ಅಕ್ಟೋಬರ್ 20, 2020
23 °C
ಸೇವಾ ಸಪ್ತಾಹ ವರ್ಚ್ಯುವಲ್‌ ರ‍್ಯಾಲಿಯಲ್ಲಿ ಯಡಿಯೂರಪ್ಪ

ಮೋದಿ ದೇಶದ ಅಭಿವೃದ್ಧಿಯ ದಿಕ್ಕು ಬದಲಿಸಿದ್ದಾರೆ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆದ ಸೇವಾ ಸಪ್ತಾಹ ವರ್ಚ್ಯುವಲ್‌ ರ‍್ಯಾಲಿಯನ್ನು ಭಾನುವಾರ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿ ಸಂಸ್ಥಾಪಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯುಳ್ಳ ನಾಯಕತ್ವ ನೀಡಿದ್ದಾರೆ. ಅವರಿಂದಾಗಿ ಭಾರತದ ಅಭಿವೃದ್ಧಿ ದಿಕ್ಕು ಬದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ನರೇಂದ್ರ ಮೋದಿ ಅವರ 70ನೇ ಜನ್ಮದಿನದ ಅಂಗವಾಗಿ ಬಿಜೆಪಿ ಆಯೋಜಿಸಿರುವ ಸೇವಾ ಸಪ್ತಾಹದ ಭಾಗವಾಗಿ ಪಕ್ಷದ ರಾಜ್ಯ ಘಟಕವು ಭಾನುವಾರ ಹಮ್ಮಿಕೊಂಡಿದ್ದ ವರ್ಚ್ಯುವಲ್‌ ರ‍್ಯಾಲಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇನ್ನೊಂದು ಅವಧಿಗೆ ಮೋದಿ ಅವರೇ ಪ್ರಧಾನಿ ಆಗಲಿದ್ದಾರೆ. ಆ ಬಳಿಕ ಭಾರತ ಜಗತ್ತಿನಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ’ ಎಂದರು.

ಮೋದಿ ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ವಿದೇಶಾಂಗ ನೀತಿಯ ಕುರಿತು ಅವರಿಗೆ ಇರುವ ಸ್ಪಷ್ಟವಾದ ನಿಲುವುಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಚ್ಚಿನ ಗೌರವ ಲಭಿಸಿದೆ. ಸಂಸತ್ತಿನಲ್ಲಿ ಪ್ರಧಾನಿಯವರ ನಡವಳಿಕೆಗಳು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗಿವೆ ಎಂದು ಹೇಳಿದರು.

ಸ್ಪಷ್ಟ ಕಲ್ಪನೆ: ದೇಶದ ಅಭಿವೃದ್ಧಿಯ ಕುರಿತು ಮೋದಿಯವರಿಗೆ ಸ್ಪಷ್ಟವಾದ ಕಲ್ಪನೆಗಳಿವೆ. ಯುವ ಸಮುದಾಯವನ್ನು ಕೇಂದ್ರೀಕರಿಸಿಕೊಂಡೇ ಯೋಜನೆಗಳನ್ನು ರೂಪಿಸುವುದು ಅವರ ಆದ್ಯತೆಯಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತವು ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

‘ನರೇಂದ್ರ ಮೋದಿಯವರ ವ್ಯಕ್ತಿತ್ವ’ ಕುರಿತು ಹುಬ್ಬಳ್ಳಿಯಿಂದ ಮಾತನಾಡಿದ ಸಾಹಿತಿ, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌, ‘ನರೇಂದ್ರ ಮೋದಿಯವರಲ್ಲಿ ಮಾತೃ ಹೃದಯವಿದೆ. ಎಲ್ಲ ವಿಚಾರಗಳಲ್ಲೂ ಅವರು ತಾಯಿಯಂತೆ ಸ್ಪಂದಿಸುತ್ತಾರೆ. ಸದಾ ಮಾನವೀಯ ಅಂತಃಕರಣದಿಂದ ಯೋಚಿಸುವ ಅವರದ್ದು ವರ್ಣನೆಗೆ ನಿಲುಕದ ವ್ಯಕ್ತಿತ್ವ’ ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ ಶೆಟ್ಟರ್‌, ಶಾಸಕ ಅರವಿಂದ ಲಿಂಬಾವಳಿ, ಬಿಜೆಪಿ ಮುಖಂಡ ಮಹೇಶ್‌ ಟೆಂಗಿನಕಾಯಿ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಅಭಿವೃದ್ಧಿಗೆ ಸಲಹೆ

‘ನಾನು ದೆಹಲಿಗೆ ಹೋಗಿದ್ದಾಗ ಪ್ರಧಾನಿಯವರನ್ನು ಭೇಟಿಮಾಡಿದ್ದೆ. 40 ನಿಮಿಷಗಳ ಕಾಲ ನನ್ನೊಂದಿಗೆ ಚರ್ಚಿಸಿದರು. ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು. ನಗರದ ಅಭಿವೃದ್ಧಿಯ ವಿಚಾರಗಳಲ್ಲಿ ಕೆಲವು ಪ್ರಮುಖರ ಸಲಹೆ ಪಡೆಯುವಂತೆ ತಿಳಿಸಿದ ಪ್ರಧಾನಿ, ಅವರ ಮೊಬೈಲ್‌ ನಂಬರ್‌ಗಳನ್ನೂ ನನಗೆ ನೀಡಿದರು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು