ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಅಶೋಕ

Last Updated 27 ಫೆಬ್ರುವರಿ 2022, 9:12 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಲಿವೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಸಂತನಗರದಲ್ಲಿರುವ ಬಂಜಾರ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್‌ ಅವರ 283ನೇ ಜಯಂತಿ, ಬಂಜಾರ ದೀವಿಗೆ ಸ್ಮರಣ ಸಂಚಿಕೆ ಬಿಡುಗಡೆ, ಬಂಜಾರ ಕಲಾಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಲು ಕಂದಾಯ ಸಚಿವನಾಗಿ ಈಗಾಗಲೇ ಕಾರ್ಯಾದೇಶ ಮಾಡಿದ್ದೇನೆ. ತಾಂಡಾ ವಾಸಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವುದು ನನ್ನ ಆಶಯ. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ‌ ಸಂದರ್ಭದಲ್ಲಿ ಲಂಬಾಣಿ ತಾಂಡಾದಲ್ಲಿ ವಾಸ್ತವ್ಯ ಮಾಡಿ, ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ’ ಎಂದು ಅವರು ಹೇಳಿದರು.

‘ರಾಜ್ಯದ ಅತ್ಯಂತ ಸೌಮ್ಯ ಸ್ವಭಾವದ ಜನಾಂಗಗಳಲ್ಲಿ ಬಂಜಾರ ಜನಾಂಗ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಬಂಜಾರ ಜನಾಂಗದವರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು, ತಾಂಡಾಗಳಲ್ಲಿ ವಾಸ ಮಾಡುವ ಈ ಜನಾಂಗದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ. ಸಂತ ಸೇವಾಲಾಲ್ ಮಾಹಾರಾಜ್ ಅವರು ಸೇವೆಗೆ ಮಾದರಿ’ ಎಂದರು.

ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಸಚಿವರಿಗೆ ಲಂಬಾಣಿ ಸಮುದಾಯದ ಪೇಟ ತೊಡಿಸಿ, ಸಾಂಪ್ರದಾಯಿಕ ವಾದ್ಯ, ನೃತ್ಯದೊಂದಿಗೆ ಸ್ವಾಗತ ನೀಡಿದರು. ಕಾರ್ಯಕ್ರಮದಲ್ಲಿ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಸಂಸದ ಉಮೇಶ್ ಜಾಧವ್, ಬಿ.ಟಿ. ಲಲಿತಾ ನಾಯಕ್, ಶಾಸಕ ರಾಜಕುಮಾರ ತೆಲ್ಕೂರ, ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT