ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿ ಕಡಿತ

ಕರ್ನಾಟಕ ಪುರಸಭೆಗಳ ಕಾಯ್ದೆ –1964ರ ಸೆಕ್ಷನ್‌ 387 ರದ್ದತಿಗೆ ನಿರ್ಧಾರ
Last Updated 12 ಮೇ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿಲ್ಲದ ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಡಿ ನಿವೇಶನ ಹಾಗೂ ಒಂದು ಎಕರೆವರೆಗಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ– ಸ್ವತ್ತುಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನೀಡುವ ವ್ಯವಸ್ಥೆ ಜಾರಿಗೊಳಿಸುವ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಇದಕ್ಕೆ ಪೂರಕವಾಗಿ ಪುರಸಭೆ ಕಾಯ್ದೆ–1964ರ ಸೆಕ್ಷನ್‌ 387 ಅನ್ನು ರದ್ದುಗೊಳಿಸುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ.

ಇದರಿಂದಾಗಿ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರಗಳಿಲ್ಲದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ಮಾಲೀಕರು ಬಿಡಿ ನಿವೇಶನಗಳು ಹಾಗೂ ಸಣ್ಣ ವಿಸ್ತೀರ್ಣದ ಜಮೀನುಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರೆ ಕೆಲಸಗಳಿಗೆ ಸಮೀಪದ ನಗರ ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ತಪ್ಪಲಿದೆ. 2021ರವರೆಗೂ ಸ್ಥಳೀಯ ಸಂಸ್ಥೆಗಳ ಆಸ್ತಿ ಪಟ್ಟಿಯಲ್ಲಿರುವ ಸ್ಥಿರಾಸ್ತಿಗಳಿಗೆ ಇದು ಅನ್ವಯವಾಗಲಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರಗಳಿಲ್ಲದ ಪ್ರದೇಶದ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಸಮೀಪದ ನಗರ ಯೋಜನಾ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯಬೇಕು ಎಂಬ ಅಂಶ ಸೆಕ್ಷನ್‌ 387 ರಲ್ಲಿತ್ತು. ಅದರಿಂದ ಬಿಡಿ ನಿವೇಶನಗಳ ಮಾಲೀಕರು ಮತ್ತು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸುವವರಿಗೆ ತೊಂದರೆ ಆಗುತ್ತಿದೆ. ಈ ಕಾರಣಕ್ಕಾಗಿ ಸೆಕ್ಷನ್‌ 387 ಅನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ಈ ನಿರ್ಬಂಧದಿಂದಾಗಿ 2016 ರಿಂದ ಈಚೆಗೆಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿ ಯಲ್ಲಿ ಬಿಡಿ ನಿವೇಶನ ಹಾಗೂ ಸಣ್ಣ ವಿಸ್ತೀರ್ಣದ ಜಮೀನುಗಳಲ್ಲಿ ಮನೆ ನಿರ್ಮಾಣಕ್ಕೆ ತೊಂದರೆ ಆಗಿದೆ ಎಂದು ತಿಳಿಸಿದರು.

ಈ ಆಸ್ತಿಗಳ ಖಾತೆ ಬದಲಾವಣೆ, 11ಇ ನಕ್ಷೆ ಪಡೆಯುವುದು, ಆಸ್ತಿಗಳ ಪರಭಾರೆ ಮತ್ತು ಅಡಮಾನಕ್ಕೂ ಅಡ್ಡಿಯಾಗಿದೆ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸುವುದಕ್ಕಾಗಿ ಈ ನಿರ್ಧಾರ ಮಾಡಲಾಗಿದೆ. 2016ಕ್ಕೂ ಹಿಂದೆ ಇದ್ದ ವ್ಯವಸ್ಥೆಯೇ ಮರುಜಾರಿಗೆ ಬರಲಿದೆ ಎಂದರು.

ಹೊಸದಾಗಿ ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಗೆ ಸೇರಿದ ಗ್ರಾಮಗಳ ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಆಸ್ತಿಗಳು, ಗ್ರಾಮ ಪಂಚಾಯಿತಿಗಳಲ್ಲಿನ ಆಸ್ತಿ ಪಟ್ಟಿಗಳಲ್ಲಿ ನಮೂದಾಗಿರುವ ಆಸ್ತಿಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಪರವಾನಗಿ, ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆ ಇರಲಿದೆ ಎಂದರು.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲಿದ್ದು, ಈಗಾಗಲೇ ಸರ್ಕಾರದಿಂದ ಪಟ್ಟಾ ವಿತರಣೆಯಾಗಿರುವ ಮನೆಗಳು ಹಾಗೂ ಜಿಪಿಎಸ್‌ ದತ್ತಾಂಶದಲ್ಲಿ ಮಾಲೀಕರ ಹೆಸರು ನಮೂದಾಗಿರುವ ನಿವೇಶನಗಳನ್ನೂ ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಯಥಾಸ್ಥಿತಿ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಗರ ಯೋಜನಾ ಪ್ರಾಧಿಕಾರಗಳಿಂದಲೇ ಅನುಮತಿಪಡೆಯುವ ವ್ಯವಸ್ಥೆ ಮುಂದುವರಿಯಲಿದೆ. ಇತರ ಪ್ರದೇಶಗಳಲ್ಲೂ ಒಂದು ಎಕರೆವರೆಗಿನ ಪ್ರದೇಶದಲ್ಲಿ ಬಡಾವಣೆ ನಿರ್ಮಿಸುವುದಾದರೆ ಯೋಜನಾ ಪ್ರಾಧಿಕಾರಗಳಿಂದಲೇ ಅನುಮತಿ ಪಡೆಯಬೇಕು ಎಂದು ಮಾಧುಸ್ವಾಮಿ ಹೇಳಿದರು.

ಬಗರ್‌ ಹುಕುಂ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು (ಬಗರ್‌ ಹುಕುಂ) ಸಕ್ರಮಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಮತ್ತೆ ಆರು ತಿಂಗಳ ಕಾಲಾವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ‘ಕೋವಿಡ್‌ ಕಾರಣದಿಂದ ಹಿಂದೆ ಎಲ್ಲ ರೈತರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಅನೇಕ ಶಾಸಕರು ಒತ್ತಾಯಿಸಿದ್ದರು. ಈಗ ಆರು ತಿಂಗಳ ಕಾಲ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ’ ಎಂದರು.

ಮತಾಂತರ ನಿಷೇಧ: ಸುಗ್ರೀವಾಜ್ಞೆಗೆ ನಿರ್ಧಾರ

ಬೆಂಗಳೂರು: ‘ಕರ್ನಾಟಕ ಧಾರ್ಮಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ’ (ಮತಾಂತರ ನಿಷೇಧ)
ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಈ ಮಸೂದೆಯನ್ನು 2021ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಪ್ರತಿಪಕ್ಷಗಳ ಪ್ರಬಲ ವಿರೋಧದಿಂದಾಗಿ ವಿಧಾನ ಪರಿಷತ್‌ನಲ್ಲಿ ಮಂಡಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ವಿಧಾನ ಸಭೆಯ ಒಪ್ಪಿಗೆ ಪಡೆದಿರುವ ಮಸೂದೆಯನ್ನೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

* ಬಿಡಿ ನಿವೇಶನಗಳ ಮಾಲೀಕರು ಮತ್ತು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸುವವರಿಗೆ ತೊಂದರೆ ತಪ್ಪಲಿದೆ

* ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಆಸ್ತಿಗಳು, ಗ್ರಾಮ ಪಂಚಾಯಿತಿಗಳಲ್ಲಿನ ಆಸ್ತಿ ಪಟ್ಟಿಗಳಲ್ಲಿರುವ ಆಸ್ತಿಗಳಿಗೂ ನಿಯಮ ಅನ್ವಯ

*ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಗರ ಯೋಜನಾ ಪ್ರಾಧಿಕಾರಗಳಿಂದಲೇ ಅನುಮತಿ ಪಡೆಯುವ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT