ಬುಧವಾರ, ಮೇ 25, 2022
27 °C

ಮುರುಗೇಶ ನಿರಾಣಿ ಸಿಎಂ ಆಗ್ತಾರೆ: ಈಶ್ವರಪ್ಪ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಎಸ್.ಈಶ್ವರಪ್ಪ

ಬೀಳಗಿ (ಬಾಗಲಕೋಟೆ): ‘ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ಯಾವ ಸಂದರ್ಭದಲ್ಲಿ ಆಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಪಟ್ಟಣದಲ್ಲಿ ಭಾನುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ’ನಮ್ಮ ನಾಯಕರಾದ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ‌ಖಚಿತ. ಆದರೆ, ನಾಳೆಯೇ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ‘ ಎಂದರು.

‘ನಾನು ಹೀಗೆ ಹೇಳಿದೆ ಅಂತ, ನಾಳೆಯೇ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ತೆಗೆದುಬಿಡುತ್ತಾರೆ ಎಂದು ಪತ್ರಕರ್ತರು ಬರೆದು ಬಿಡಬಾರದು’ ಎಂದು ಚಟಾಕಿ ಹಾರಿಸಿದರು. ‘ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆ ಮುರುಗೇಶ ನಿರಾಣಿ ಅವರಿಗೆ ಇದೆ. ಅವರಿಗೆ ರಾಜ್ಯವನ್ನು ಮುನ್ನಡೆಸುವ ಶಕ್ತಿ ಇದೆ. ಒಂದಲ್ಲೊಂದು ದಿನ ಆ ಸ್ಥಾನಕ್ಕೆ ಬರಲಿದ್ದಾರೆ’ ಎಂದು ಪುನರುಚ್ಚರಿಸಿದರು.

‘ರಾಜ್ಯದಲ್ಲಿ ‌ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡುವ ನಾಯಕ ಮುಖ್ಯಮಂತ್ರಿ ‌ಆಗಬೇಕು ಎಂಬುದು ಬಹುತೇಕ ಜನತೆಯ ಆಶಯವಾಗಿದೆ. ನಿರಾಣಿ ಅವರು ಮುಖ್ಯಮಂತ್ರಿಯಾದರೆ ಖಂಡಿತವಾಗಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.

‘ನೀವು (ನಿರಾಣಿ) ಸಿ.ಎಂ ಆದರೆ, ಹಿಂದುಳಿದಿರುವ ವರ್ಗಕ್ಕೆ ನ್ಯಾಯ ಕೊಡುತ್ತೀರಾ’ ಎಂದು ಸಚಿವರನ್ನು ಈಶ್ವರಪ್ಪ ಪ್ರಶ್ನಿಸಿದಾಗ, ವೇದಿಕೆಯಲ್ಲಿದ್ದ ನಿರಾಣಿ, ‘ಖಂಡಿತವಾಗಿಯೂ ಮಾಡೇ ಮಾಡುತ್ತೇನೆ’ ಎಂದು ವಿಜೇಯದ ಸಂಕೇತ ತೋರಿದರು.

ನಿರಾಣಿ ಅವರು ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಈಶ್ವರಪ್ಪ ಹೇಳುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದ  ಕಾರ್ಯಕರ್ತರು ಜೈಕಾರ ಹಾಕಿ, ಚಪ್ಪಾಳೆ ಹೊಡೆದರು. 'ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ‌ ಅವರಿಗೆ ಶುಭವಾಗಲಿ' ಎಂದು ಘೋಷಣೆ ಕೂಗಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು