ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ | ವಿಶ್ವವಿಖ್ಯಾತ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸಾಕ್ಷಿ

Last Updated 5 ಅಕ್ಟೋಬರ್ 2022, 13:00 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಕರಾಳ ನೆರಳಿನಲ್ಲಿ ಎರಡು ವರ್ಷ ಅಂಬಾವಿಲಾಸ ಅರಮನೆಯ ಆವರಣಕ್ಕಷ್ಟೇ ಸೀಮಿತವಾಗಿದ್ದ ವಿಶ್ವವಿಖ್ಯಾತ ದಸರೆ ಉತ್ಸವದ ಸರಳತೆಯ ಪರದೆಯು ಸರಿದು ಅದ್ಧೂರಿ ಜಂಬೂಸವಾರಿಗೆ ಬುಧವಾರ ಲಕ್ಷಾಂತರ ಮಂದಿ ಸಾಕ್ಷಿಯಾದರು.

ಇಳಿ ಸಂಜೆಯ ತಿಳಿಮುಗಿಲ ತಂಪು ಹವೆಯ ನಡುವೆ ಬುಧವಾರ ಸಂಜೆ 5.37ಕ್ಕೆ ಅರಮನೆ ಆವರಣದಲ್ಲಿ ಚಾಲನೆ ದೊರಕಿದ ಬಳಿಕ ಜಂಬೂಸವಾರಿ ರಾಜಪಥವನ್ನು ಪ್ರವೇಶಿಸಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಮಧ್ಯಾಹ್ನ 2.34ಕ್ಕೆ ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಸಲ್ಲಿಸಿದ ಬಳಿಕ ಸ್ತಬ್ದಚಿತ್ರ ಮತ್ತು ಕಲಾತಂಡಗಳ ಮೆರವಣಿಗೆ ಆರಂಭವಾಯಿತು.

ಎರಡೂವರೆ ಗಂಟೆಗಳ ಕಾಲ ಜನಸಾಗರವನ್ನು ಹಿಡಿದಿಟ್ಟ ಮೆರವಣಿಗೆಯ ಬಳಿಕ, ಅಭಿಮನ್ಯು ಆನೆ ಹೊತ್ತಿದ್ದ, 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವಮೂರ್ತಿಗೆೆ ಮುಖ್ಯಮಂತ್ರಿ ಪುಷ್ಪನಮನ ಸಲ್ಲಿಸಿದರು. ನಂತರ ರಾಷ್ಟ್ರಗೀತೆ ಶುರುವಾಗಿ ಮುಗಿಯುವುದರೊಳಗೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿತು.

ಮೆರವಣಿಗೆಯಲ್ಲಿ ಅಂಬಾರಿ ಆನೆ ಜೊತೆ ಕುಮ್ಕಿ ಆನೆಗಳಾಗಿ ಚೈತ್ರಾ, ಕಾವೇರಿ ಹೆಜ್ಜೆ ಹಾಕಿದರೆ, ಅರ್ಜುನ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿದ. ಗೋಪಾಲಸ್ವಾಮಿ, ಭೀಮ, ಧನಂಜಯ, ಮಹೇಂದ್ರ, ಗೋಪಿ ಆನೆಗಳು ಜೊತೆಯಾದವು.
ಆಕರ್ಷಕವಾದ ಸ್ತಬ್ದ ಚಿತ್ರಗಳು, ಪೊಲೀಸ್‌ ಪಡೆ, ಅಶ್ವಾರೋಹಿ ಪಡೆಗಳೊಂದಿಗೆ, ಮಂಗಳವಾದ್ಯ, ವೀರಗಾಸೆ, ಕತ್ತಿ ವರಸೆ, ನಗಾರಿ, ಡೊಳ್ಳು, ಕಂಸಾಳೆ, ತಾಳಮದ್ದಲೆ, ಪಟ ಕುಣಿತ, ಗೊಂಬೆ ಕುಣಿತ ಸೇರಿದಂತೆ 53 ಜನಪದ ಕಲಾ ತಂಡಗಳ ನೂರಾರು ಕಲಾವಿದರು ನೃತ್ಯ–ನಡಿಗೆಯ ಮೂಲಕ ಕಲೆ–ಸಾಂಸ್ಕೃತಿಕ ವೈಭವವನ್ನು ಸೃಷ್ಟಿಸಿ ಮೆರವಣಿಗೆಗೆ ಮೆರುಗು ತಂದರು. 47 ಸ್ತಬ್ದಚಿತ್ರಗಳು ನಾಡಿನ ಇತಿಹಾಸ, ಸಂಸ್ಕೃತಿ, ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲಿದವು.

ಜಂಬೂಸವಾರಿಯನ್ನು ಅರಮನೆಯ ಹೊರಗಿನಿಂದ ವೀಕ್ಷಿಸಲು ಚಾಮರಾಜೇಂದ್ರ ವೃತ್ತ, ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆಯಲ್ಲಿ ಸಾವಿರಾರು ಮಂದಿ ನೆರೆದಿದ್ದರು. ದೀಪಾಲಂಕಾರಕ್ಕೆಂದು ಅಳವಡಿಸಿದ್ದ ಕಂಬಗಳು, ಕಟೌಟ್‌ಗಳ ಮೇಲೂ ಅಪಾಯ ಲೆಕ್ಕಿಸದೆ ಕುಳಿತಿದ್ದರು.

ಕನ್ನಡ ಸಂಸ್ಕೃತಿ ಸಚಿವರೂ ವೇದಿಕೆಯಲ್ಲಿ

ಜಂಬೂಸವಾರಿಗೆ ಚಾಲನೆ ನೀಡುವ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್‌ ಅವರೂ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಈ ಬಗ್ಗೆ ಸರ್ಕಾರ ಆದೇಶವನ್ನೂ ಹೊರಡಿಸಿತ್ತು.

ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಎಸ್.ಎ.ರಾಮದಾಸ್ , ಮೇಯರ್ ಶಿವಕುಮಾರ್ , ಜಿಲ್ಲಾಧಿಕಾರಿ ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಚಂದ್ರ ಗುಪ್ತ,
ವೇದಿಕೆಯಲ್ಲಿದ್ದರು.

ಜನಪದ ಕಲೆ- ಸ್ತಬ್ದ ಚಿತ್ರಗಳ ಲೋಕ

ಸ್ತಬ್ದಚಿತ್ರ ಹಾಗೂ ಕಲಾತಂಡಗಳ‌ ಮೆರವಣಿಗೆಯಲ್ಲಿ ರಾಜ್ಯ 31 ಜಿಲ್ಲೆಗಳ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಅಭಿವೃದ್ಧಿ ಅಂಶಗಳು ಹೊಳೆದವು.

ಮೈಸೂರು ಪೇಟ, ಮಲ್ಲಿಗೆ, ವಿಶ್ವವಿದ್ಯಾಲಯ, ಬಾಗಲಕೋಟೆಯ ಮುಧೋಳ ಶ್ವಾನ, ಇಳಕಲ್‌ಸೀರೆಯಿಂದ ಶುರುವಾದ ಪ್ರದರ್ಶನ ಯಾದಗಿರಿಯ ಸುರಪುರ ಕೋಟೆಯ‌ ಸ್ತಬ್ದಚಿತ್ರದಿಂದ ಕೊನೆಗೊಂಡಿತು.

ಬಳ್ಳಾರಿ ಕೋಟೆ, ಚಾಮರಾಜನಗರದ ಪುನೀತ್ ರಾಜಕುಮಾರ್ ಪ್ರತಿಮೆ, ಚಿತ್ರದುರ್ಗದ ವಾಣಿವಿಲಾಸ ಜಲಾಶಯ, ದಕ್ಷಿಣ ಕನ್ನಡದ ಹುಲಿವೇಷ, ಬೇಲೂರು ಚೆನ್ನಕೇಶವ ಗುಡಿ, ಕೊಡಗಿನ ಬ್ರಹ್ಮಗಿರಿ ಕೋಟೆ, ಕೋಲಾರದ ಬಿಕೆಎಸ್ ಅಯ್ಯಂಗಾರ್ ಯೋಗಥಾನ್, ಶಿವಮೊಗ್ಗದ ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿ, ಕಾರವಾರ ನೌಕಾ ನೆಲೆ, ಸುರಪುರದ ಕೋಟೆ, ಹಂಪಿಯ ಕಲ್ಲಿನ ರಥ ಸ್ತಬ್ದಚಿತ್ರಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT