ಭಾನುವಾರ, ನವೆಂಬರ್ 27, 2022
26 °C

ಮೈಸೂರು ವಿ. ಸುಬ್ರಹ್ಮಣ್ಯ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಗೀತ ಕಲಾವಿದ ಹಾಗೂ ಕಲಾ ವಿಮರ್ಶಕ ಮೈಸೂರು ವಿ.ಸುಬ್ರಹ್ಮಣ್ಯ (73) ಶುಕ್ರವಾರ ನಿಧನರಾದರು. 

ಮಲ್ಲೇಶ್ವರದಲ್ಲಿ ವಾಸವಿದ್ದ ಅವರಿಗೆ, ಅಂಗಾಂಗ ವೈಫಲ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಬಿದ್ದು ಗಾಯಗೊಂಡಿದ್ದ ಅವರನ್ನು ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ 2.30ಕ್ಕೆ ಮೃತಪಟ್ಟರು. ಅವರಿಗೆ ಸಹೋದರಿ ರಮಾ ಬೆಣ್ಣೂರ್, ಸಹೋದರ ರಮೇಶ್ ಇದ್ದಾರೆ. ಕಳೆದ ಜನವರಿಯಲ್ಲಿ ಅವರ ಪತ್ನಿ ಸಾವಿತ್ರಿ ನಿಧನರಾಗಿದ್ದರು.

ಸಂಜೆಯವರೆಗೂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮರಾಜಪೇಟೆಯ ಟಿ.ಆರ್.ಮಿಲ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. 

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮನೆಮಾತಾಗಿರುವ ಸುಬ್ರಹ್ಮಣ್ಯ ಅವರು, ಮೈಸೂರ್ ಆಸ್ಥಾನ ವಿದ್ವಾನ್ ಹಾಗೂ ಸಂಗೀತ ಮನೆತನಕ್ಕೆ ಸೇರಿದವರಾಗಿದ್ದಾರೆ. ವೀಣೆ ಶೇಷಣ್ಣ ಅವರು ಇವರ →ಮುತ್ತಾತ. ತಂದೆ ವೆಂಕಟನಾರಾಯಣ ರಾಯರು ವೈಣಿಕರಾಗಿದ್ದರು. ಅವರಿಂದ ಸಂಗೀತಾಭ್ಯಾಸ ಮಾಡಿದ ಇವರು, ಹಾಡುಗಾರಿಕೆ ಹಾಗೂ ವೀಣಾವಾದನದಲ್ಲಿ ಪ್ರೌಢಿಮೆ ಹೊಂದಿದ್ದರು. ಸಂಗೀತದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಇವರಿಗೆ ವಿಮರ್ಶಾ ಕ್ಷೇತ್ರದಲ್ಲಿ ಹೆಚ್ಚಿನ ಒಲವಿತ್ತು. 

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ನಿಯಮಿತವಾಗಿ ಕಲಾ ವಿಮರ್ಶೆ ಬರೆದಿದ್ದರು. ಬೆಂಗಳೂರು ಗಾಯನ ಸಮಾಜದ 38ನೇ ಸಂಗೀತ ಗೋಷ್ಠಿಯ ಅಧ್ಯಕ್ಷರಾಗಿದ್ದರು. ‘ಮುರಳಿವಾಣಿ’ ಹಾಗೂ ‘ಗಾನ ಕಲಾ ಮಂಜರಿ’ ಕೃತಿಗಳನ್ನು ಸಂಪಾದಿಸಿ
ದ್ದಾರೆ. ಸಂಗೀತ ಕಲಾರತ್ನ, ಸಂಗೀತ ಕಲಾಭೂಷಣ, ಕರ್ನಾಟಕ ಕಲಾಶ್ರೀ, ಸಾಹಿತ್ಯ ಕಲಾಶ್ರೀ ಪ್ರಶಸ್ತಿಗಳು ಅವರಿಗೆ ಸಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು