ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಕುರಿತ ಹೇಳಿಕೆ: ಕ್ಷಮೆಯಾಚನೆ

ಹೇಳಿಕೆ ಹಿಂಪಡೆದ ಬಿಜೆಪಿ ಸದಸ್ಯ ಎನ್‌. ರವಿಕುಮಾರ್ l ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಧರಣಿ
Last Updated 22 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಳಗಾವಿ: ಜವಾಹರಲಾಲ್ ನೆಹರೂ ಕುರಿತು ಬಿಜೆಪಿ ಸದಸ್ಯ ಎನ್‌. ರವಿಕುಮಾರ್ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಗುರುವಾರ ವಿಧಾನಪರಿಷತ್‌ನಲ್ಲಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು.

ಒತ್ತಡಕ್ಕೆ ಮಣಿದ ರವಿಕುಮಾರ್‌ ಕ್ಷಮೆ ಕೇಳಿದ್ದಲ್ಲದೇ, ತಾವು ನೀಡಿದ್ದ ಹೇಳಿಕೆಯನ್ನು ವಾಪಸ್‌ ಪಡೆದರು.

ಬೆಳಿಗ್ಗೆ ನಡೆದ ಕಲಾಪದಲ್ಲಿ, ಕುಲಪತಿ ಹುದ್ದೆಗೆ ₹6 ಕೋಟಿಯಿಂದ ₹15 ಕೋಟಿವರೆಗೆ ಕೊಡಬೇಕಾಗಿದೆ ಎಂದು ಬಿಜೆಪಿಯ ಸಂಸದರೊಬ್ಬರು ಹೇಳಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ವಿರೋಧ ಪಕ್ಷದನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿ
ದರು. ಈ ವಿಷಯದಲ್ಲಿ ಚರ್ಚೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆಗ ಮಧ್ಯಪ್ರವೇಶಿಸಿದ್ದ ಬಿಜೆಪಿಯ ಎನ್. ರವಿಕುಮಾರ್‌, ಶಾಸಕ ರಮೇಶ್‌ಕುಮಾರ್ ಹೇಳಿಕೆ ಆಧರಿಸಿ ಕಾಂಗ್ರೆಸ್‌ ಬಗ್ಗೆಯೂ ಚರ್ಚೆ ನಡೆಯಲಿ ಎಂದು ಹೇಳಿದ್ದರು. ಇದರಿಂದ ಕೆರಳಿದ್ದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದ್ದರು. ಧಿಕ್ಕಾರ, ಘೋಷಣೆಗಳು ಮೊಳಗಿದ್ದವು. ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.

ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದ ಮುಂದೆ ಧರಣಿ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು, ರವಿಕುಮಾರ್ ಅವರು ಹೇಳಿಕೆ ವಾಪಸ್‌ ಪಡೆದು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು, ’ಈಗಾಗಲೇ ರವಿಕುಮಾರ್‌ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಗಿದೆ‘ ಎಂದು ಮನವೊಲಿಸಿದರೂ ಸದಸ್ಯರು ಒಪ್ಪಲಿಲ್ಲ. ಹೀಗಾಗಿ, ಕಲಾಪ ಮುಂದೂಡಿ ಮಾತುಕತೆಗೆ ಸಭಾನಾಯಕರು ಮತ್ತು ವಿರೋಧ ಪಕ್ಷದ ನಾಯಕರನ್ನು ಸಭಾಪತಿ ಆಹ್ವಾನಿಸಿದರು. ಸುಮಾರು 45 ನಿಮಿಷಗಳ ಚರ್ಚೆ ನಡೆದರೂ ಮಾತುಕತೆ ಫಲಪ್ರದವಾಗಲಿಲ್ಲ. ಕಾಂಗ್ರೆಸ್‌ ಸದಸ್ಯರು ಮತ್ತೆ ಧರಣಿ ನಡೆಸಿದರು.

ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು, ’ರಮೇಶ್‌ ಕುಮಾರ್‌ ಅವರು ಈ ರೀತಿ ಹೇಳಿಕೆ ನೀಡಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಕ್ಷಮಾಪಣೆ ಕೇಳುವವರೆಗೂ ಸದನದ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ. ಮಾಧ್ಯಮಗಳಲ್ಲಿ ಈಗಾಗಲೇ ರವಿಕುಮಾರ್‌ ಹೇಳಿಕೆ ಪ್ರಸಾರವಾಗಿರುವುದರಿಂದ ಕಡತದಿಂದ ಈ ವಿಷಯ ತೆಗೆದು ಹಾಕಿದರೆ ಸಾಕಾಗುವುದಿಲ್ಲ‘ ಎಂದು ಹೇಳಿದರು.

ಆಡಳಿತ ಪಕ್ಷದ ಸದಸ್ಯರ ಸಲಹೆ ಮತ್ತು ವಿರೋಧ ಪಕ್ಷದ ಸದಸ್ಯರ ಒತ್ತಾಯಕ್ಕೆ ಮಣಿದ ರವಿಕುಮಾರ್‌ ಅವರು, ’ಸಭಾಪತಿ ಪೀಠಕ್ಕೆ ಕ್ಷಮೆಯಾಚಿಸುತ್ತೇನೆ. ನೆಹರೂ ಕುರಿತ ಶಬ್ದಗಳನ್ನು ವಾಪಸ್ ಪಡೆಯುತ್ತೇನೆ. ಆದರೆ, ವಿರೋಧ ಪಕ್ಷದ ನಾಯಕರು ನಾಗಪುರಕ್ಕೆ ಹಾವಿನ ಪುರ ಎಂದು ಕರೆಯುತ್ತಾರೆ ಹಾವು ಎಂದರೆ ವಿಷದ ಸಂಕೇತ. ಇಂತಹ ಶಬ್ದ ಪ್ರಯೋಗಗಳನ್ನು ಅವರು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

***
ಭಾರತವನ್ನು ಬಲಿಷ್ಠವಾಗಿ ಕಟ್ಟಲು ಭೀಮ ಹೆಜ್ಜೆ ಇರಿಸಿದವರು ನೆಹರೂ. ಅವರ ಬಗ್ಗೆ ವಾಜಪೇಯಿ ಅವರು ಮಾಡಿದ ಭಾಷಣವನ್ನು ಎಲ್ಲರೂ ಓದಬೇಕು
-ಎಚ್‌. ವಿಶ್ವನಾಥ್‌, ಬಿಜೆಪಿ ಸದಸ್ಯ

***
ನೆಹರೂ ವಿಷಯ ಅನಗತ್ಯವಾಗಿತ್ತು. ಎದೆಯೊಳಗೆ ವಿಷ ತುಂಬಿಕೊಂಡು ಬಾಯಿಯಲ್ಲಿ ಉಗುಳುವುದು ಬೇಡ. ಸದನದ ಪಾವಿತ್ರ್ಯತೆ ಬಗ್ಗೆ ಅರಿತುಕೊಳ್ಳಬೇಕು.

-ಆಯನೂರು ಮಂಜುನಾಥ್‌, ಬಿಜೆಪಿ ಸದಸ್ಯ<

***

ನಾನು ಕನ್ನಡದ ಭಕ್ತ. ಹೀಗಾಗಿ, ನಾಗಪುರವನ್ನು ಹಾವಿನ ಪುರ ಎಂದು ಕರೆದಿದ್ದೇನೆ. ಅದರಲ್ಲಿ ತಪ್ಪೇನಿದೆ. ಹಳೆಯ ವಿಷಯಗಳನ್ನು ಸದನದಲ್ಲಿ ಕೆಣಕಬೇಡಿ.

-ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

***

ನಮ್ಮ ಪಾಲಿನ ದೇವಾಲಯವಾಗಿರುವ ಆರ್‌ಎಸ್‌ಎಸ್‌ ಅನ್ನು ವಿರೋಧ ಪಕ್ಷದವರು ಸುಲಭ ಶೌಚಾಲಯ ಎಂದಿದ್ದಾರೆ. ಆರ್‌ಎಸ್‌ಎಸ್‌ ದೇಶಭಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ

-ಭಾರತಿ ಶೆಟ್ಟಿ, ಬಿಜೆಪಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT