ಶುಕ್ರವಾರ, ಮಾರ್ಚ್ 24, 2023
30 °C

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ‌ ಆನೆ ಇನ್ನಿಲ್ಲ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಈಡಾಗಿ ತೀವ್ರವಾಗಿ ಗಾಯಗೊಂಡಿದ್ದ, ‘ಭವಿಷ್ಯದ ಅಂಬಾರಿ ಆನೆ’ ಎಂದೇ ಬಿಂಬಿತವಾಗಿದ್ದ ‘ಗೋಪಾಲಸ್ವಾಮಿ’ (39) ಬುಧವಾರ ಮೃತಪಟ್ಟಿತು. ‘ಮತ್ತಿಗೋಡು ಆನೆ ಶಿಬಿರ’ದಲ್ಲಿದ್ದ ಆನೆಯು 2012ರಿಂದ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿತ್ತು.

‘ಮೇಯುವ ಸಲುವಾಗಿ ನೇರಳಕುಪ್ಪೆ ‘ಬಿ’ ಹಾಡಿಯ ಕ್ಯಾಂಪಿನಿಂದ ಬಿಟ್ಟಿದ್ದ ವೇಳೆಯಲ್ಲಿ, ಮಸ್ತಿಯಲ್ಲಿದ್ದ ಕಾಡಾನೆಯು ಗೋಪಾಲಸ್ವಾಮಿ ಮೇಲೆ ದಾಳಿ ಮಾಡಿ ಮುಂಗಾಲಿನ ಮೂಳೆ ಮುರಿದಿತ್ತು. ಹಿಂಭಾಗಕ್ಕೂ ತೀವ್ರವಾಗಿ ಗಾಯಗೊಳಿಸಿತ್ತು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾದಾಟದಲ್ಲಿದ್ದಾಗಲೇ ಗೋಪಾಲಸ್ವಾಮಿ ಮಾವುತ ಮತ್ತು ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ’ ಎಂದರು.

‘ಮೈಸೂರು ಮೃಗಾಲಯದ ವೈದ್ಯ ಡಾ.ಮದನ್‌, ಇಲಾಖೆಯ ಪಶುವೈದ್ಯರಾದ ಡಾ.ರಮೇಶ್ ಮತ್ತು ಡಾ.ಚಿಟ್ಟಿಯಪ್ಪ ಮಂಗಳವಾರ ಮಧ್ಯಾಹ್ನದಿಂದಲೂ ಚಿಕಿತ್ಸೆ ನೀಡಿದ್ದರು. ಸ್ಪಂದಿಸದೇ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತಪಟ್ಟಿತು’ ಎಂದು ಮಾಹಿತಿ ನೀಡಿದರು. 

ತುಂಬಲಾರದ ನಷ್ಟ: ‘ಮೂರು ವರ್ಷದ ನಂತರ ‘ಅಭಿಮನ್ಯು’ (67) ಆನೆಗೆ ಅಂಬಾರಿ ಹೊರಿಸುವಂತಿಲ್ಲ. ಗೋಪಾಲಸ್ವಾಮಿ ಅಭಿಮನ್ಯುವಿನ ಸ್ಥಾನ ತುಂಬಲಿದ್ದ. ಸೌಮ್ಯ ಸ್ವಭಾವದ ಬಲಾಢ್ಯ ಆನೆಯನ್ನು ಕಳೆದುಕೊಂಡಂತಾಗಿದೆ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ವಿಷಾದಿಸಿದರು. 

ಸಕಲ ಗೌರವದೊಂದಿಗೆ ಧಾರ್ಮಿಕ ವಿಧಿವಿಧಾನದಂತೆ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್ ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು