ಭಾನುವಾರ, ಸೆಪ್ಟೆಂಬರ್ 26, 2021
27 °C

ಈ ವರ್ಷದಿಂದಲೇ ‘ರಾಷ್ಟ್ರೀಯ ಶಿಕ್ಷಣ ನೀತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2021-22) ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ಜಿ ನಾಯ್ಕ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಶನಿವಾರ ಸಮಾಲೋಚನೆ ನಡೆಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದ್ದಾರೆ.

ಹೊಸ ನೀತಿಯ ಬಗ್ಗೆ ವಿವರಿಸಿದ ಅಶ್ವತ್ಥನಾರಾಯಣ, ‘ಈ ವರ್ಷ ಬಿ.ಎ, ಬಿ.ಎಸ್ಸಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಮೂರನೇ ವರ್ಷದ ಆರಂಭದಲ್ಲಿ ಒಂದು ಐಚ್ಛಿಕ, ಇನ್ನೊಂದು ಐಚ್ಛಿಕವಲ್ಲದ ವಿಷಯವಾಗಿ ಅಥವಾ ಎರಡೂ ವಿಷಯಗಳನ್ನು ಐಚ್ಛಿಕವಾಗಿ ಆಯ್ಕೆಗೆ ಅವಕಾಶವಿದೆ.ಇವುಗಳ ಜೊತೆಗೆ ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ, ಕನ್ನಡ ಮಾತೃಭಾಷೆ ಅಲ್ಲದವರಿಗೆ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದೆ’ ಎಂದರು.

‘ವಿದ್ಯಾರ್ಥಿ ಪ್ರಥಮ ವರ್ಷದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 5ನೇ ಹಂತದ ನಿಗದಿತ ಪಠ್ಯ ಅಧ್ಯಯನ ಮಾಡಿ, ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣಪತ್ರ ನೀಡಲಾಗುವುದು. ಎರಡನೇ ವರ್ಷದ ಅಧ್ಯಯನ ಮುಂದುವರಿಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 6ನೇ ಹಂತದ ನಿಗದಿತ ಪಠ್ಯವನ್ನು ಅಧ್ಯಯನ ಮಾಡಿ ನಿರ್ಗಮಿಸಿದರೆ ಡಿಪ್ಲೊಮಾ, ಮೂರನೇ ವರ್ಷದ ಅಧ್ಯಯನ ಮುಂದುವರಿಸಿ 3ನೇ ಹಂತದ ನಿಗದಿತ ಪಠ್ಯವನ್ನು ಅಧ್ಯಯನ ಮಾಡಿದರೆ ಪದವಿ ನೀಡಲಾಗುವುದು’ ಎಂದು ಹೇಳಿದರು.

‘ಅಧ್ಯಯನ ಮಾಡುತ್ತಿರುವ ಸಂಸ್ಥೆಯಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದರೆ 8ನೇ ಹಂತದಲ್ಲಿ ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರಿಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಆನರ್ಸ್‍ ಪದವಿ ನೀಡಲಾಗುವುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂಥ ಸ್ನಾತಕ ಆನರ್ಸ್‍ ಪದವೀಧರರು ನೇರವಾಗಿ ಪಿಎಚ್‌.ಡಿ ಅಧ್ಯಯನಕ್ಕೆ ಸೇರಲು ಅರ್ಹರು. ವಿದ್ಯಾರ್ಥಿ  ಅಧ್ಯಯನ ಮಾಡುವ ಸಂಸ್ಥೆಯಲ್ಲಿ ಸ್ನಾತಕ ಆನರ್ಸ್‌ ಪದವಿ ಲಭ್ಯವಿಲ್ಲದಿದ್ದರೆ, ನಾಲ್ಕನೇ ವರ್ಷದ ಸ್ನಾತಕ ಆನರ್ಸ್‌ ಪದವಿಗೆ ಬೇರೊಂದು ಸಂಸ್ಥೆಯನ್ನು ಸೇರಲು ಅವಕಾಶವಿದೆ’ ಎಂದೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು