ಬುಧವಾರ, ಮಾರ್ಚ್ 22, 2023
21 °C
ಜ. 28 ಮತ್ತು 29 ರಂದು ಕಾರ್ಯಕ್ರಮ: ಸಚಿವ ಬಿ.ಶ್ರೀರಾಮುಲು ವಿವರಣೆ

ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವಕ್ಕೆ ಸಿದ್ಧತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಇದೇ ಜನವರಿ 28 ಮತ್ತು 29 ರಂದು ರಾಯಚೂರಿನಲ್ಲಿ ಮೊದಲಬಾರಿಗೆ ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವ ಆಯೋಜಿಸುವುದಕ್ಕೆ ಸರ್ಕಾರದಿಂದ ತೀರ್ಮಾನಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಅಧಿಕಾರಿಗಳು ಪೂರ್ವಸಿದ್ಧತೆ ಮಾಡುತ್ತಿದ್ದಾರೆ. ರಾಯಚೂರು ಕೃಷಿ ವಿವಿ ಆವರಣ ಅಥವಾ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ಕಾರ್ಯಕ್ರಮವು ವರ್ಣವೈವಿಧ್ಯಮಯವಾಗಿ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರಿದ್ದು, ಅವರದೇ ಆದ ಭಾಷೆ. ಸಂಸ್ಕೃತಿಯನ್ನು ಹೊಂದಿರುತ್ತಾರೆ. ಈ ಎಲ್ಲಾ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರನ್ನೂ ಒಟ್ಟುಗೂಡಿಸುವುದು, ಅವರ ಭಾಷೆ, ಕಲೆ, ಸಂಸ್ಕೃತಿ, ಆಚಾರ - ವಿಚಾರ, ಉಡುಗೆ - ತೊಡುಗೆಗಳು ಹಾಗೂ ಈ ಸಮುದಾಯದವರ ಆಹಾರ ವೈವಿಧ್ಯತೆಯನ್ನು ಪರಸ್ಪರ ಪರಿಚಯಿಸುವುದು ಹಾಗೂ ನಾಗರೀಕ ಸಮಾಜದಲ್ಲಿ ಅವು ಬೆಳಕಿಗೆ ಬರುವಂತೆ ಮಾಡುವುದು ಬುಡಕಟ್ಟು ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಬುಡಕಟ್ಟು ಉತ್ಸವವು ಬುಡಕಟ್ಟು ಜನರ ಸಂಪದ್ಭರಿತ ಕಲೆಯ ವೈವಿಧ್ಯತೆಯನ್ನು, ಬುಡಕಟ್ಟು ಪಂಗಡಗಳಲ್ಲಿ ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಕಲಾ ಸೊಗಡನ್ನು ಸಾಮಾನ್ಯ ಜನರಿಗೆ ಪರಿಚಯಿಸುವುದು, ಪ್ರಾಚೀನ ಸಮುದಾಯದ ಭಾಷಾ ಸಾಹಿತ್ಯವನ್ನು ಈ ಬುಡಕಟ್ಟು ಉತ್ಸವದ ಮೂಲಕ ಅನಾವರಣಗೊಳಿಸುವ ಮಹತ್ವದ ಕಾರ್ಯ, ವಿಶಿಷ್ಟ ನೃತ್ಯಕಲೆಯ ಸೊಬಗು, ಹಲವಾರು ನೃತ್ಯ ಭಂಗಿಗಳು, ಕಲಾ ಸಂಭ್ರಮದ ಸಾಂಗತ್ಯವಾಗಿದೆ ಎಂದು ತಿಳಿಸಿದರು.

ನಿಸರ್ಗದ ಮಕ್ಕಳ ಲಯಬದ್ಧ ಕುಣಿತವು ಕಲಾರಸಿಕರ ಕಣ್ಮನ ಸೆಳೆಯುವ ಅತ್ಯಂತ ವೈಶಿಷ್ಟ್ಯಪೂರ್ಣವಾದ ಕಲಾಮೇಳ ಇದಾಗಲಿದೆ. ಸಾಂಸ್ಕೃತಿಕ ಮತ್ತು ಸ್ವತಂತ್ರವಾದ ಕಲಾ ಪ್ರಕಾರಗಳು, ವಿಶಿಷ್ಟವಾದ ಆಕರ್ಷಣೆಯನ್ನು ಹೊಂದಿದೆ. ಅವರ ಪ್ರತಿಭೆಗೊಂದು ಪ್ರದರ್ಶನ ವೇದಿಕೆಯನ್ನು ಕಲ್ಪಿಸಿ, ಅವರ ಆತ್ಮಸ್ಥೆರ್ಯವನ್ನು ಹೆಚ್ಚಿಸಿ ಇಂತಹ ಸಂಪದ್ಭರಿತ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಿ, ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಹೇಳಿದರು.

ಇದುವರೆಗೂ ಮೈಸೂರು, ಮಂಗಳೂರು, ವಿಜಯಪುರ, ಬೆಳಗಾವಿ, ಚಾಮರಾಜನಗರದಲ್ಲಿ ರಾಜ್ಯಮಟ್ಟ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಆಜಾದಿ ಕಾ ಬುಡಕಟ್ಟು ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನಿಂದ ರಾಯಚೂರಿನ ಮೂಲಕ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೃತ್ಯೋತ್ಸವ ಉದ್ಘಾಟಿಸುವರು. ರಾಜ್ಯ ಮತ್ತು ಕೇಂದ್ರದಿಂದ ಹಲವು ಸಚಿವರು ಕೂಡಾ ಭಾಗವಹಿಸುವರು. ಈಗಾಗಲೇ ಕಾರ್ಯಕ್ರಮದ ಉಶಸ್ವಿ ಆಯೋಜನೆಗಾಗಿ ವೇದಿಕೆ, ವಸತಿ, ಆಹಾರ, ಸಾರಿಗೆ, ಪ್ರಚಾರ, ಸಮನ್ವಯ ಪತ್ರವ್ಯವಹಾರ, ಕಾರ್ಯಕ್ರಮ ಸಂಯೋಜನೆ, ಸಾಮಗ್ರಿ ಖರೀದಿ, ಸಾಂಸ್ಕೃತಿಕ ಚಟುವಟಿಕೆಗಳು, ಸಂಚಾರ ವ್ಯವಸ್ಥೆಗಳಿಗೆ ಜಿಲ್ಲಾಮಟ್ಟದ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವಕ್ಕೆ ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಕೇರಳ, ಮಧ್ಯಪ್ರದೇಶ, ನಾಗಾಲ್ಯಾಂಡ್ ಸೇರಿ 15 ರಾಜ್ಯಗಳಿಂದ ಕಲಾತಂಡಗಳು ನೃತ್ಯೋತ್ಸ ವದಲ್ಲಿ ಪಾಲ್ಗೊಂಡು ತಮ್ಮ ಸಂಸ್ಕೃತಿಯನ್ನು ಪರಿಚಯಿಸಲಿದ್ದಾರೆ. ಕರ್ನಾಟಕ ರಾಜ್ಯದಿಂದಲೂ ಅನೇಕ ಬುಡಕಟ್ಟು ನೃತ್ಯ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ಮಾತನಾಡಿ, ಈಗಾಗಲೇ ಕಾರ್ಯಕ್ರಮದ ಸಿದ್ಧತೆಗಾಗಿ ಪೂರ್ವಭಾವಿ ಸಭೆ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ರಾಷ್ಟ್ರಮಟ್ಟದ ಕಾರ್ಯಕ್ರಮವು ರಾಯಚೂರಿನಲ್ಲಿ ಏರ್ಪಡಿಸುತ್ತಿರುವುದು ಸುದೈವ. ಕಾರ್ಯಕ್ರಮಕ್ಕೆ ಸಹಕಾರ ಕೋರಿ ಬುಡಕಟ್ಟು ಸಮುದಾಯಗಳ ಮುಖಂಡರೆಲ್ಲರ ಸಭೆ ನಡೆಸಲಾಗುವುದು ಎಂದರು.

ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರಾದ ರಘುವೀರ ನಾಯಕ, ಡಾ.ಶಾರದಾ ಹುಲಿನಾಯಕ, ತಾಯಣ್ಣ ನಾಯಕ ಅವರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು