ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

‘ಬೆಂಗಳೂರು -ಬೆಳವಣಿಗೆ ಜೋರು’ ಗೋಷ್ಠಿಯಲ್ಲಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ
Last Updated 19 ಮಾರ್ಚ್ 2023, 21:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಾದರೆ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು. ಅದಕ್ಕೆ ಶೇಕಡ 50ರಷ್ಟು ಸಹಾಯಧನ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾ‌ರಾಯಣ ಅಭಿಪ್ರಾಯಪಟ್ಟರು.

ನವ ಕರ್ನಾಟಕ ಶೃಂಗದಲ್ಲಿ ‘ಬೆಂಗಳೂರು-ಬೆಳವಣಿಗೆ ಜೋರು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹಲವು ಸ್ತರಗಳಲ್ಲಿ ರಸ್ತೆಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುತ್ತಿದ್ದೇವೆ. ಕಳದ ಕೆಲವು ತಿಂಗಳಿಂದ ಸಂಚಾರದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಅತಿ ದಟ್ಟಣೆಯ ಕಾರಿಡಾರ್‌ಗಳನ್ನು ಗುರುತಿಸಿ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಪೆರಿಫೆರಲ್‌ ವರ್ತುಲ ರಸ್ತೆ ಮತ್ತು ಉಪ ನಗರ ವರ್ತುಲ ರಸ್ತೆಗಳ ನಿರ್ಮಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಧೈರ್ಯವನ್ನು ಈ ಸರ್ಕಾರ ತೋರಿದೆ. ಉಪ ನಗರ ರೈಲು ಸೇವೆ ಆರಂಭಿಸುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಮುಂದಾಗಿದೆ. ಮೆಟ್ರೊ ರೈಲು ಸೇವೆಯನ್ನು ವಿಸ್ತರಿಸಿದ್ದು, ಬಿಎಂಟಿಸಿಯನ್ನೂ ಬಲಪಡಿಸಲಾಗುತ್ತಿದೆ ಎಂದು ವಿವರ ನೀಡಿದರು.

ಎಂಜಿನಿಯರಿಂಗ್, ಉದ್ಯೋಗ, ನವೋದ್ಯಮ, ಆವಿಷ್ಕಾರ, ತಂತ್ರಜ್ಞಾನ, ಬಯೋ ಟೆಕ್ನಾಲಜಿ ಸೇರಿದಂತೆ ಯಾವುದೇ ಹೊಸತನದಲ್ಲಿ ಬೆಂಗಳೂರು ಮುಂದಿದೆ. ಎಲ್ಲರಲ್ಲೂ ಸುಸ್ಥಿರ ಅಭಿವೃದ್ಧಿ ಕಂಡು ದೇಶಕ್ಕೆ ಮಾದರಿಯಾಗಿದೆ ಎಂದರು.

ಬೆಂಗಳೂರು ಎಲ್ಲ ರೀತಿಯಲ್ಲೂ ಉತ್ತಮ ನಗರವಾಗಿ ಬೆಳೆದಿದೆ. ರಾಜ್ಯದ ಇತರೆ ನಗರಗಳೂ ಬೆಂಗಳೂರಿನಂತೆ ಭರವಸೆಯ ನಗರಗಳಾಗಿ ಹೊರಹೊಮ್ಮಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದರು.

‘ನಮ್ಮ ಬೆಂಗಳೂರು ಫೌಂಡೇಷನ್‌’ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಜಾಕೋಬ್ ಮಾತನಾಡಿ, ‘ಬೆಂಗಳೂರು ಬರೀ ಮಾಹಿತಿ ತಂತ್ರಜ್ಞಾನದ ರಾಜಧಾನಿ ಅಲ್ಲ. ಆರೋಗ್ಯ ಕ್ಷೇತ್ರದ ರಾಜಧಾನಿಯೂ‌ ಆಗಿದೆ. ಕೋವಿಡ್ ನಮಗೆ ಸಾಕಷ್ಟು ಪಾಠ ಕಲಿಸಿತು. ನಗರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿದೆ. ಇದನ್ನು ನಿಯಂತ್ರಣಕ್ಕೆ ತರಬೇಕಿದೆ’ ಎಂದು ಕೋರಿದರು.

ಕೋವಿಡ್ ನಂತರ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಇಡೀ ವಿಶ್ವವೇ ಕೋವಿಡ್ ನಿಯಂತ್ರಣಕ್ಕೆ ಸಾಹಸಪಟ್ಟರೆ ಬೆಂಗಳೂರಿನಲ್ಲಿ ಜನರ ಸಹಕಾರದಿಂದ ಸುಲಭವಾಗಿ ಕೋವಿಡ್ ನಿಯಂತ್ರಣಕ್ಕೆ ತರಲಾಯಿತು. ಲಸಿಕೆ ವಿತರಣೆ, ಬೆಡ್ ವ್ಯವಸ್ಥೆ ಉತ್ತಮವಾಗಿತ್ತು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ‘ದೇಶದ ಉತ್ತಮ‌ ನಗರಗಳ ಪೈಕಿ ಬೆಂಗಳೂರು ಒಂದು. ಕುಡಿಯುವ ನೀರು, ರೈಲು ವ್ಯವಸ್ಥೆ, ಕಾನೂನು ಸುವವ್ಯಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಆಧುನಿಕ ತಾಂತ್ರಿಕತೆ ಅಳವಡಿಸಿಕೊಳ್ಳಲಾಗಿದೆ. ಸಾಕಷ್ಟು ಮೂಲಸೌಕರ್ಯ ಕಲ್ಪಿಸುತ್ತಿರುವ ಕಾರಣದಿಂದ ನಗರವು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಕೆಲವು ಬಡಾವಣೆಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ. ಆ ಬಡಾವಣೆಗೂ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಬಿಜೆಪಿ ಮಾಧ್ಯಮ ತಜ್ಞ ಸಿ.ಎ. ಮೋಹನ್ ವಿಶ್ವ ಮಾತನಾಡಿ, ‘ಮಳೆಗಾಲದಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ನಾಯಂಡಹಳ್ಳಿ, ಹೊಸಕೆರೆಹಳ್ಳಿ ಹಾಗೂ ಸಿಲ್ಕ್ ಬೋರ್ಡ್ ಬಳಿ ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ಪರಿಹರಿಸಲಾಗಿದೆ. ಒತ್ತುವರಿಯಿಂದ ಕೆಲವು ಭಾಗದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಅದನ್ನೂ ಬಗೆಹರಿಸಲಾಗುತ್ತಿದೆ. ಅಲ್ಲದೇ ನಗರದ ಎಲ್ಲ ವರ್ಗದ ನಿವಾಸಿಗಳಿಗೂ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಮೆಟ್ರೊದಂತಹ‌ ಸಮೂಹ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನ ತೆರಿಗೆದಾರರು ಇದ್ದು, ಆದ್ಯತೆ ಮೇರೆಗೆ ಸೌಕರ್ಯ ಕಲ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ನಮಗೆ ಸಿಕ್ಕಿದ್ದು ಮೂರುವರೆ ವರ್ಷದ ಆಡಳಿತಾವಧಿ ಮಾತ್ರ. ಎರಡು ವರ್ಷ ಕೋವಿಡ್‌ನಿಂದ ಸಮಸ್ಯೆಯಾಗಿತ್ತು. ಕೇವಲ ಒಂದೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ’ ಎಂದರು.

‘ಡೆಕ್ಕನ್‌ ಹೆರಾಲ್ಡ್‌’ ಹಿರಿಯ ವರದಿಗಾರ್ತಿ ಸ್ನೇಹಾ ರಮೇಶ್ ಗೋಷ್ಠಿಯನ್ನು ನಿರ್ವಹಿಸಿದರು.

‘ಒಂದು ವಾರದಲ್ಲಿ ಅನುಷ್ಠಾನ’

‘ಬೆಂಗಳೂರು ನಗರಕ್ಕೆ ಏನು ಬೇಕು, ಯಾವ ಯೋಜನೆ ಅನುಷ್ಠಾನ ಮಾಡಬೇಕು ಎಂಬುದರ ಪರಿಕಲ್ಪನೆ ನಮಗೆ ಇದೆ. ಚುನಾವಣೆ ಮುಗಿದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವಾರದಲ್ಲಿ ಎಲ್ಲ ಯೋಜನೆಗಳ ಅನುಷ್ಠಾನ ಆರಂಭವಾಗಲಿದೆ’ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

‘ನಗರದ ಸಮಗ್ರ ಅಭಿವೃದ್ಧಿ ನಮ್ಮ ಬಿಜೆಪಿ ಕನಸು. ನಗರಕ್ಕಾಗಿಯೇ ಸಾವಿರಾರು ಕೋಟಿಗಳನ್ನು ವ್ಯಯ ಮಾಡಿ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇನ್ನು ಹಲವು ಯೋಜನೆಗಳ ಅನುಷ್ಠಾನ ಬಾಕಿ ಇದ್ದು, ಮುಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಅದನ್ನು ಪೂರೈಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT