ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್‌ ರೂಪದಲ್ಲಿ ನಾವಿಕ ವಿಶ್ವಕನ್ನಡ ಸಮ್ಮೇಳನ ಆ.27ರಿಂದ

Last Updated 21 ಜುಲೈ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ನಾವಿಕ ವಿಶ್ವ ಕನ್ನಡ ಸಮಾವೇಶ ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ನಡೆಯಲಿದೆ. ಇದು 6ನೇ ಸಮಾವೇಶವಾಗಿದ್ದು ಆ.27ರಿಂದ 29ರವರೆಗೆ ನಡೆಯಲಿದೆ.

‘ಕೋವಿಡ್‌ ಕಾರಣದಿಂದ ಈ ಬಾರಿ ಆನ್‌ಲೈನ್‌ನಲ್ಲಿಯೇ ಸಮಾವೇಶ ನಡೆಯಲಿದೆ. ವಿಶ್ವದ 80 ಕನ್ನಡ ಸಂಘಗಳು ಭಾಗವಹಿಸುತ್ತಿದ್ದು, 175ಕ್ಕೂ ಹೆಚ್ಚು ಕಲಾವಿದರು–ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ’ ಎಂದು ಅಮೆರಿಕದ ನಾವಿಕ ಸಂಸ್ಥೆಯ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವದ ಬೇರೆ ಬೇರೆ ಕಡೆ ಇರುವ ಕನ್ನಡಿಗರು ಹಾಗೂ ಕರ್ನಾಟಕದಲ್ಲಿರುವ ಕಲಾವಿದರಿಗೆ ತಮ್ಮ ಕಾರ್ಯಕ್ರಮವನ್ನು ಚಿತ್ರೀಕರಿಸಿ ವಿಡಿಯೊ ಕಳುಹಿಸಲು ಕೋರಲಾಗಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ತೆರೆಯಲಾದ ಐದು ವಾಹಿನಿಗಳ ಮೂಲಕ ಮೂರು ದಿನಗಳಲ್ಲಿ ಸುಮಾರು 120 ತಾಸುಗಳ ಕಾರ್ಯಕ್ರಮಗಳು ಪ್ರಸಾರವಾಗಲಿವೆ’ ಎಂದು ಅವರು ಹೇಳಿದರು.

‘ಕಲಾವಿದರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನೇರವಾಗಿ ನೆರವು ನೀಡಿದರೆ ಕಲಾವಿದರು ಮುಜುಗರ ಪಟ್ಟುಕೊಳ್ಳುತ್ತಾರೆ. ಅದಕ್ಕಾಗಿ, ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದರ ಮೂಲಕ, ಅವರ ಕಲೆಯನ್ನು ಗೌರವಿಸಿ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದೂ ಅವರು ಹೇಳಿದರು.

‘ನಾಟಕ, ನೃತ್ಯ, ಸಂಗೀತ, ಕನ್ನಡ ಕಲಿಕೆ ಮತ್ತು ವಾಣಿಜ್ಯ–ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಾಹಿನಿಗಳನ್ನು ರೂಪಿಸಲಾಗಿದೆ. 3ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಈ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ನೋಡುಗರಿಗೆ ವಿಶಿಷ್ಟ ಅನುಭವ ನೀಡಲಿವೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕ್ರಮ ನೋಂದಣಿಗೆ ವಿದೇಶಿ ಕುಟುಂಬವೊಂದಕ್ಕೆ 25 ಅಮೆರಿಕನ್‌ ಡಾಲರ್ (₹2,000) ಶುಲ್ಕ ನಿಗದಿ ಮಾಡಲಾಗಿದೆ. ಭಾರತೀಯರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಶುಲ್ಕದಿಂದ ಸಂಗ್ರಹವಾದ ಮತ್ತು ಪ್ರಾಯೋಜಕತ್ವದಿಂದ ಬಂದ ಹಣವನ್ನು ಕಲಾವಿದರಿಗೆ ಹಾಗೂ ‘‘ಕರುಣಾ ಅಮೆರಿಕ’’ ಸಂಸ್ಥೆಗೆ ನೀಡಲಾಗುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಸುತ್ತ–ಮುತ್ತ ವಾಸಿಸುತ್ತಿರುವ ಸೋಲಿಗ ಸಮುದಾಯದವರಿಗೆ ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಒದಗಿಸುವ ಕೆಲಸವನ್ನು ಕರುಣಾ ಅಮೆರಿಕ ಮಾಡಿದೆ’ ಎಂದು ಹೇಳಿದರು.

www.nvks21.com ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT