ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ದಾಳಿಗೆ ನ್ಯಾಯಾಧೀಶರ ಅನುಮತಿ ಬೇಕಿಲ್ಲ: ಹೈಕೋರ್ಟ್

Last Updated 27 ಮಾರ್ಚ್ 2021, 17:56 IST
ಅಕ್ಷರ ಗಾತ್ರ

ಬೆಂಗಳೂರು: ‘ದಾಳಿಗೂ, ತನಿಖೆಗೂ ವ್ಯತ್ಯಾಸ ಇದೆ. ಪೊಲೀಸರು ದಾಳಿ ನಡೆಸುವ ಮುನ್ನ ನ್ಯಾಯಾಧೀಶರ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಚಿಕ್ಕಮಗಳೂರು ಪೊಲೀಸರ ದಾಳಿ ಮತ್ತು ನಂತರದ ತನಿಖೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ಧ ಪೀಠ, ‘ಅಂದರ್–ಬಾಹರ್ ಜೂಜು ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತರೆ ಪೊಲೀಸರು ದಾಳಿ ನಡೆಸಲು ನ್ಯಾಯಾಧೀಶರ ಅನುಮತಿ ಪಡೆಯಬೇಕಿಲ್ಲ’ ಎಂದು ಹೇಳಿದೆ.

ಚಿಕ್ಕಮಗಳೂರಿನ ಹಿರಿಯ ನಾಗರಿಕರ ಸೇವಾ ಕೇಂದ್ರದ ಮೇಲೆ ಫೆಬ್ರುವರಿಯಲ್ಲಿ ದಾಳಿ ನಡೆಸಿದ್ದ ಪೊಲೀಸರು ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ‘ಬಸವನಹಳ್ಳಿ ಪೊಲೀಸರು ₹12,550 ನಗದು ವಶಕ್ಕೆ ಪಡೆದಿದ್ದರು. ನ್ಯಾಯಾಧೀಶರ ಅನುಮತಿ ಪಡೆದ ಬಳಿಕ ಎಫ್‌ಐಆರ್ ದಾಖಲಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 155(2) ‍ಪ್ರಕಾರ, ದಾಳಿ ಮತ್ತು ತನಿಖೆ ನಡೆಸುವ ಮೊದಲು ನ್ಯಾಯಾಧೀಶರ ಅನುಮತಿಯನ್ನು ಪೊಲೀಸರು ಪಡೆಯಬೇಕು’ ಎಂದು ಅರ್ಜಿದಾರರು ಹೇಳಿದ್ದಾರೆ.

‘ಎಫ್‌ಐಆರ್ ದಾಖಲಿಸಲು ಮಾತ್ರ ನ್ಯಾಯಾಧೀಶರ ಅನುಮತಿ ಅಗತ್ಯವಿದೆ. ದಾಳಿ ಮತ್ತು ತನಿಖೆ ಎರಡೂ ಒಂದೇ ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಡಿವೈಎಸ್‌ಪಿಯಿಂದ ಶೋಧಕ್ಕೆ ವಾರಂಟ್ ಪಡೆದ ಬಳಿಕವೇ ದಾಳಿ ನಡೆಸಿದ್ದಾರೆ. ಅಂದರ್–ಬಾಹರ್ ಜೂಜು ನಡೆಯುತ್ತಿರುವ ಮಾಹಿತಿ ದೊರೆತಾಗ ನ್ಯಾಯಾಧೀಶರ ಅನುಮತಿಗಾಗಿ ಕಾಯಲು ಸಾಧ್ಯವೇ’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT