ಶುಕ್ರವಾರ, ಜುಲೈ 30, 2021
20 °C

ಮೀಸಲಾತಿ ಪ್ರಮಾಣ ಹೆಚ್ಚಳ ಅಗತ್ಯ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲ್ಲ ಸಮುದಾಯಗಳಲ್ಲಿ ಇರುವ ಹಿಂದುಳಿದ ಮತ್ತು ಬಡ ಜನರಿಗೆ ಮೀಸಲಾತಿ ಸೌಲಭ್ಯ ದೊರೆಯಬೇಕಿದೆ. ಅದಕ್ಕೆ ಪೂರಕವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮೀಸಲಾತಿಯ ಪ್ರಮಾಣ ಶೇಕಡ 50 ರಷ್ಟನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹೆಚ್ಚಿಸಲೇಬೇಕಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ' ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಂವಿಧಾನದ ತಿದ್ದುಪಡಿ ಆಗಬೇಕಿದೆ. ಸಂವಿಧಾನದ 102ನೇ ವಿಧಿಯ ಪ್ರಕಾರ, ರಾಜ್ಯಗಳಿಗೂ ಮೀಸಲಾತಿ ನೀಡುವ ಅಧಿಕಾರವಿದೆ. ಈ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಯಾವುದೇ ಸಮುದಾಯದ ಬಡವರು, ಹಿಂದುಳಿದವರು ಮಾತ್ರ ಮೀಸಲಾತಿ ‌ಸೌಲಭ್ಯ ಪಡೆಯಬೇಕು. ಆದರೆ, ಅನರ್ಹರೇ ಮೀಸಲಾತಿ ಪಡೆಯುತ್ತಿರುವುದು ಹೆಚ್ಚುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ‌ ಮೀಸಲಾತಿಯನ್ನು ಆ ವರ್ಗದಲ್ಲಿರುವ ಆರ್ಥಿಕವಾಗಿ ಬಲಾಢ್ಯರಾದವರೇ ಪಡೆಯುತ್ತಿದ್ದಾರೆ. ಅದನ್ನು ತಪ್ಪಿಸಲು ಕ್ರಮದ ಅಗತ್ಯವಿದೆ ಎಂದರು.

‘ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸಬೇಕಿದೆ. ಅದರಿಂದ ಆಯಾ ಸಮುದಾಯಗಳ ಜನರಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ. ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸುವಂತೆ ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ’ ಎಂದು ಅಠಾವಳೆ ಹೇಳಿದರು.

ಕರ್ನಾಟಕಕ್ಕೆ ಹೆಚ್ಚಿನ ಅನುಕೂಲ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಳು ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುಕೂಲಗಳು ಆಗಿವೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ 1.52 ಕೋಟಿ ಜನ ಧನ್‌ ಖಾತೆಗಳನ್ನು ತೆರೆಯಲಾಗಿದೆ. ಮುದ್ರಾ ಯೋಜನೆಯಡಿ 2.96 ಕೋಟಿ ಜನರಿಗೆ ಸಾಲ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯದಲ್ಲಿ 1.89 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಉಜ್ವಲ ಯೋಜನೆಯಡಿ 2.39 ಕೋಟಿ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು