ಗುರುವಾರ , ಅಕ್ಟೋಬರ್ 21, 2021
28 °C
‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರ

ರಾಜ್ಯಕ್ಕೆ ಹೊಸ ಉದ್ಯೋಗ ನೀತಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ಹೊಸ ಉದ್ಯೋಗ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸುವವರಿಗೆ ಹೆಚ್ಚಿನ ಉತ್ತೇಜನ ನೀಡುವುದು ಉದ್ಯೋಗ ನೀತಿಯ ಆಶಯವಾಗಿದೆ. ಹೆಚ್ಚು ಉದ್ಯೋಗಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ’ ಎಂದು ವಿವರಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 75 ಸಾವಿರ ಮಕ್ಕಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುವುದು. ಈ ಮೂಲಕ ಸಮಾಜದ ಎಲ್ಲ ವರ್ಗದವರು ಉದ್ಯಮಿಗಳಾಗಬೇಕು ಎನ್ನುವ ಆಶಯವನ್ನು ಸರ್ಕಾರ ಹೊಂದಿದೆ’ ಎಂದರು.

‘ಇದೇ ರೀತಿ, ದೇಶದಲ್ಲಿ ಮೊದಲ ಬಾರಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ. ಎಲ್ಲ ವಲಯಗಳಲ್ಲಿ ಸಂಶೋಧನೆಗಳು ನಡೆಯಬೇಕಾಗಿವೆ. ಈಗಾಗಲೇ ವಿದ್ಯುನ್ಮಾನ, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ 180ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ರಾಜ್ಯದಲ್ಲಿವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಅತಿ ಹೆಚ್ಚು ನವೋದ್ಯಮಗಳಿವೆ. ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ. 488 ನವೋದ್ಯಮಗಳಲ್ಲಿ ಶೇ 30ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಶೇ 24ರಷ್ಟು ನವೋದ್ಯಮಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಸ್ಥಾಪಿಸಲಾಗಿದೆ. ಇದೊಂದು ದೊಡ್ಡ ಸಾಧನೆ. ಯುವಕರು ನವೋದ್ಯಮ ಆರಂಭಿಸಿದರೆ ₹50 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು. ಈ ರೀತಿಯ ನೀತಿ ಯಾವ ರಾಜ್ಯದಲ್ಲಿಯೂ ಇಲ್ಲ’ ಎಂದು ಹೇಳಿದರು.

ಶಾಸಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಕರ್ನಾಟಕವು ಉದ್ಯಮ ಸ್ನೇಹಿಯಾಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುವ ಮೂಲಕ ರಾಜ್ಯವನ್ನು ಹೂಡಿಕೆದಾರರ ತಾಣವನ್ನಾಗಿ ಪರಿವರ್ತಿಸಲಾಗಿದೆ. ಸುಲಲಿತ ಉದ್ಯಮಗಳನ್ನು ನಡೆಸುವ ವಾತಾವರಣವನ್ನು ರಾಜ್ಯದಲ್ಲಿ ಸೃಷ್ಟಿಸಲಾಗಿದೆ’ ಎಂದು ಪ್ರತಿಪಾದಿಸಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ಮಾತನಾಡಿ, ‘ವಿದೇಶಿ ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2022ರಲ್ಲಿ ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸುವ ಮೂಲಕ ಹತ್ತು ಲಕ್ಷ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಮೊರೊಕ್ಕೊ ರಾಯಭಾರಿ ಮೊಹಮ್ಮದ್‌ ಮಲಿಕಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.