ಭಾನುವಾರ, ಏಪ್ರಿಲ್ 18, 2021
24 °C

ಈ ಬಾರಿ ಬಜೆಟ್‌ ಗಾತ್ರ ಇಳಿಸುವುದಿಲ್ಲ, ಹೆಚ್ಚಿನ ತೆರಿಗೆ ಹೊರೆ ಇಲ್ಲ: ಬಿ.ಎಸ್.ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ಬಾರಿ ಬಜೆಟ್‌ ಗಾತ್ರವನ್ನು ಇಳಿಸುವುದಿಲ್ಲ ಮತ್ತು ಸಾರ್ವಜನಿಕರ ಮೇಲೆ ಹೆಚ್ಚಿನ ತೆರಿಗೆ ಹೊರಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ ಸಂಕಷ್ಟದ ಮಧ್ಯೆಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಜಿಲ್ಲೆಗಳಿಗೂ ಸಮಾನ ರೀತಿಯಲ್ಲಿ ಅನುದಾನ ಒದಗಿಸಲಾಗುವುದು. ಮಹಿಳೆಯರ ಸಬಲೀಕರಣ, ಕೃಷಿ, ನೀರಾವರಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ತೈಲ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಆಗಿದೆ. ಆದ್ದರಿಂದ ಬಜೆಟ್‌ನಲ್ಲಿ ಹೆಚ್ಚಿನ ತೆರಿಗೆ ಭಾರ ಹೊರಿಸುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ ತೆರಿಗೆ ಕಡಿಮೆ ಮಾಡುವ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ವೇಗ ನೀಡುವ ಮೂಲಕ ಮುಂದಿನ ಆರು ತಿಂಗಳಲ್ಲಿ ನಗರದ ಚಿತ್ರಣವನ್ನೇ ಬದಲಾಯಿಸುತ್ತೇವೆ ಎಂದರು.

ಕೇಂದ್ರ ಸರ್ಕಾರ ಹೆಚ್ಚು ಸಾಲ ಪಡೆಯಲು ಅವಕಾಶ ನೀಡಿರುವುದರಿಂದ ಬಜೆಟ್‌ನಲ್ಲಿ ಕೊರತೆ ಆಗುವುದಿಲ್ಲ. ಅಭಿವೃದ್ಧಿಗೆ ಅಗತ್ಯ ಹಣಕಾಸಿನ ನೆರವು ನೀಡಲಾಗುವುದು. ಸರ್ವ ಜನರ ಹಿತವನ್ನು ಬಜೆಟ್‌ನಲ್ಲಿ ಕಾಪಾಡುವ ಕೆಲಸ ಮಾಡಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಕಳೆದ ವರ್ಷ ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸಂಪನ್ಮೂಲ ಸಂಗ್ರಹವೇ ಆಗಿರಲಿಲ್ಲ. ಅಷ್ಟೇ ಅಲ್ಲ, ಕೋವಿಡ್‌ ವಿರುದ್ಧದ ಸಮರಕ್ಕಾಗಿ ₹6,000 ಕೋಟಿ ಖರ್ಚು ಮಾಡಲಾಯಿತು. ಬಜೆಟ್‌ ಗಾತ್ರ ಕಳೆದ ಬಾರಿಗಿಂತ ತುಸು ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು