ಶುಕ್ರವಾರ, ಅಕ್ಟೋಬರ್ 22, 2021
29 °C
ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲಬಾರಿಗೆ ಕಲಬುರ್ಗಿಗೆ ಬಂದ ನಾಯಕನಿಗೆ ಅದ್ಧೂರಿ ಸ್ವಾಗತ

ರಾಜಕೀಯ ನಿವೃತ್ತಿ ಇಲ್ಲ: ಉಸಿರು ಇರುವವರೆಗೂ ಹೋರಾಡುವೆ–ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಜನರ ಮಧ್ಯೆ ಇಲ್ಲದಿದ್ದರೆ ನಾನು ಬದುಕುವುದೇ ಇಲ್ಲ. ಎಲ್ಲಿಯವರೆಗೆ ಉಸಿರಾಡುತ್ತೇನೋ ಅಲ್ಲಿಯವರೆಗೂ ಹೋರಾಡುತ್ತೇನೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲಬಾರಿಗೆ ಶನಿವಾರ ನಗರಕ್ಕೆ ಬಂದ ಅವರಿಗೆ, ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಅದ್ಧೂರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ನಾವು ಒಂದು ತತ್ವವನ್ನು ನಂಬಿನಿಂತ ಮೇಲೆ ಅದರ ಅನುಷ್ಠಾನಕ್ಕಾಗಿ, ಅದನ್ನು ಈ ನೆಲದಲ್ಲಿ ನೆಲೆ ನಿಲ್ಲಿಸಲು ಕೊನೆಯವರೆಗೂ ಹೋರಾಡಬೇಕಾಗುತ್ತದೆ. ಮುಂದಿನ ಸಾರಿ ಖರ್ಗೆ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದು ಕೆಲವರು ಲೆಕ್ಕಾಚಾರ ಮಾಡಿಕೊಂಡಿದ್ದಾರೆ. ನಿವೃತ್ತಿ ಪಡೆಯುವುದಾದರೆ ರಾಜಕೀಯಕ್ಕೆ ಏಕೆ ಬರಬೇಕಾಗಿತ್ತು’ ಎಂದೂ ಅವರು ‍ಪ್ರಶ್ನಿಸಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಜನ ನನ್ನನ್ನು ಸೋಲಿಸಿಲ್ಲ. ಮೋದಿ, ಅಮಿತ್‌ ಶಾ ಷಡ್ಯಂತ್ರ ಮಾಡಿ ಸೋಲಿಸಿದರು’ ಎಂದರು.

‘ನಮ್ಮಲ್ಲಿ ಬೀಜಗುಣ ಇದೆ. ನೀವು ನಮ್ಮನ್ನು ಮಣ್ಣಿನಲ್ಲಿ ಹೂತರೂ ಮತ್ತೆ ಮರವಾಗಿ ಬೆಳೆಯುತ್ತೇವೆ’ ಎಂದು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದ ಅವರು, ‘ಎಲ್ಲರೂ ಕೂಡಿ ಬಾಳುವಂಥ ದೇಶವನ್ನು ಕಟ್ಟಿದ್ದು ನಾವು. ಆದರೆ, ಧರ್ಮ– ಮತದ ಅಸ್ತ್ರಗಳಿಂದ ಏಕತೆ ಒಡೆಯುತ್ತಿರುವವರು ನೀವು. ಏಳು ದಶಕಗಳಿಂದ ಕಾಂಗ್ರೆಸ್ಸಿಗರು ಏನು ಮಾಡಿದ್ದಾರೆ ಎಂದು ಪದೇಪದೇ ಕೇಳುತ್ತೀರಲ್ಲ; ನಾವು ಏನೂ ಮಾಡದೇ ಇದ್ದಿದ್ದರೆ ಇವತ್ತು ನೀವು ಬದುಕಿರುತ್ತಿದ್ದಿರಾ’ ಎಂದೂ ಖಾರವಾಗಿ ಪ್ರಶ್ನಿಸಿದರು.

ಭವ್ಯ ಮೆರವಣಿಗೆ: ಕೋವಿಡ್‌ ಕಾರಣದಿಂದ ಒಂದೂವರೆ ವರ್ಷದ ಬಳಿಕ ತವರಿಗೆ ಬಂದ ಹಿರಿಯ ನಾಯಕನಿಗೆ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ನಗರದ ತುಂಬ ಬಣ್ಣಬಣ್ಣದ ಸ್ವಾಗತ ಕಮಾನು, ಫ್ಲೆಕ್ಸ್‌, ಕಟೌಟ್‌ಗಳನ್ನು ಹಾಕಿ, ಎಲ್ಲೆಂದರಲ್ಲಿ ಕಾಂಗ್ರೆಸ್‌ನ ಧ್ವಜ ಹಾರಿಸಿದರು. ಮೆರವಣಿಗೆಯುದ್ದಕ್ಕೂ ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಮಹಿಳಾ ಕಾರ್ಯಕರ್ತೆಯರು ಕುಣಿದು ಸಂಭ್ರಮಿಸಿದರು. ಪ್ರಮುಖ ವೃತ್ತಗಳಲ್ಲಿ ಕ್ರೇನ್‌, ಜೆಸಿಬಿ ಯಂತ್ರಗಳ ಮೂಲಕ ಪುಷ್ಪವೃಷ್ಟಿ ಮಾಡಿಸಿದರು. ಮೆರವಣಿಗೆ, ಸಭೆಯಲ್ಲಿ ಕೋವಿಡ್‌ ನಿಯಮ ಪಾಲನೆಯಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು