ಮಂಗಳವಾರ, ಸೆಪ್ಟೆಂಬರ್ 21, 2021
21 °C
ಖಾಸಗೀಕರಣದ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ

ಮೈ ಷುಗರ್, ಮೈಸೂರು ಲ್ಯಾಂಪ್ಸ್‌ ಖಾಸಗೀಕರಣ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರವು ಬೇರೆ ಬೇರೆ ಉದ್ದೇಶ ಮತ್ತು ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವ ಹುನ್ನಾರ ಹೊಂದಿದೆ ಎಂದು ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡರು.

ಜೆಡಿಎಸ್‌ನ ಮರಿತಿಬ್ಬೇಗೌಡ, ‘ಮೈ ಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಅದು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಬೇಕು. ಖಾಸಗಿಯವರಿಗೆ ವಹಿಸಿದರೆ ಈ ಭಾಗದ ರೈತರು ಮತ್ತು ಕಾರ್ಮಿಕರಿಗೆ ಅನ್ಯಾಯವಾಗಲಿದೆ’ ಎಂದರು.

‘ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಡುವುದಿಲ್ಲ ಎಂದಿದ್ದರು. ಈಗ ಮತ್ತೆ ಕಂಪನಿಯನ್ನು ಖಾಸಗಿಯವರಿಗೆ ಭೋಗ್ಯಕ್ಕೆ ಕೊಡುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ದೂರಿದರು. 

ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಪರವಾಗಿ ಉತ್ತರಿಸಿದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ‘ಕಾರ್ಖಾನೆಯ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರವು ₹250 ಕೋಟಿ, ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವು ₹300 ಕೋಟಿ ನೀಡಿತ್ತು. ಆದರೂ, ಕಾರ್ಖಾನೆಯು ಈಗಲೂ ₹450 ಕೋಟಿ ನಷ್ಟದಲ್ಲಿದೆ’ ಎಂದರು. 

‘ಈ ಹಿಂದೆಯೂ ಕೆಲವು ಕಾರ್ಖಾನೆಗಳನ್ನು ಖಾಸಗಿಯವರಿಗೆ 30ರಿಂದ 40 ವರ್ಷದವರೆಗೆ ಭೋಗ್ಯಕ್ಕೆ ನೀಡಿದ ಉದಾಹರಣೆಗಳು ಇವೆ. ಅಂತಹ ಕಾರ್ಖಾನೆಗಳು ನಷ್ಟದಿಂದ ಹೊರ ಬಂದಿವೆ. ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರಿಗೂ ಅನುಕೂಲವಾಗಿದೆ‘ ಎಂದು ಸಮರ್ಥಿಸಿಕೊಂಡರು. 

‘ಮೈ ಷುಗರ್‌ ಕಾರ್ಖಾನೆ ಕುರಿತು ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದರು. ಖಾಸಗಿಯವರಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಅವರು ಹೇಳಿರಲಿಲ್ಲ’ ಎಂದೂ ನಿರಾಣಿ ಸ್ಪಷ್ಟಪಡಿಸಿದರು. 

ಖಾಸಗಿ ಆಸ್ತಿಯಾಗಿಸುವ ಹುನ್ನಾರ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ದಿ ಮೈಸೂರು ಲ್ಯಾಂಪ್‌ ವರ್ಕ್ಸ್‌ ಕಂಪನಿಯನ್ನು ಖಾಸಗಿ ಆಸ್ತಿಯಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಜೆಡಿಎಸ್‌ನ ಕಾಂತರಾಜ್ ದೂರಿದರು. 

’ಬೆಂಗಳೂರಿನ ಹೃದಯದ ಭಾಗದಲ್ಲಿ 22 ಎಕರೆ ಪ್ರದೇಶದಲ್ಲಿರುವ ಕಂಪನಿಯ ಜಾಗದಲ್ಲಿ ‘ಬೆಂಗಳೂರು ಎಕ್ಸ್‌ಪಿರಿಯನ್ಸ್‌ ಪ್ರಾಜೆಕ್ಟ್‌’ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರು ಹೆರಿಟೇಜ್‌ ಆ್ಯಂಡ್ ಎನ್ವಿರಾನ್ಮೆಂಟ್‌ ಟ್ರಸ್ಟ್‌ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿದೆ. ಮುಂದೆ, ಈ ಸರ್ಕಾರಿ ಜಾಗವನ್ನು ಖಾಸಗಿ ಆಸ್ತಿಯನ್ನಾಗಿಸಿ ಮಾರಿಕೊಳ್ಳುವ ತಂತ್ರ ಇದ್ದಂತಿದೆ‘ ಎಂದು ಹೇಳಿದರು.  

‘ಟ್ರಸ್ಟ್‌ ಮಾಡಿದರೆ ಅದು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ. ಈ ಜಾಗಕ್ಕೆ ಬಾಡಿಗೆಯೂ ಬರುವುದಿಲ್ಲ‘ ಎಂದರು. 

ಸಚಿವ ಮುರುಗೇಶ ನಿರಾಣಿ, ‘ಸರ್ಕಾರದ ಮುಖ್ಯ ಕಾರ್ಯದರ್ಶಿ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದು, ಐವರು ಐಎಎಸ್‌ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಟ್ರಸ್ಟ್‌ ಸರ್ಕಾರದ್ದೇ ಆಗಿರುವುದರಿಂದ ಖಾಸಗೀಕರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. 

‘ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ, ಆಹಾರ ಪದ್ಧತಿಯನ್ನು ಪರಿಚಯಿಸುವ ಕೇಂದ್ರವು ಈ ಜಾಗದಲ್ಲಿ ತಲೆ ಎತ್ತಲಿದೆ. ಇದನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಅಭಿವೃದ್ಧಿ ಪಡಿಸುವ ಉದ್ದೇಶವಿರುವುದರಿಂದ ಟ್ರಸ್ಟ್‌ ಎಂದು ಮಾಡಲಾಗಿದೆ’ ಎಂದೂ ನಿರಾಣಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.