ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ

ಜಾತಿ–ನಿಗಮಗಳಿಗೆ ಭರಪೂರ l ಕಲೆ, ಸಂಸ್ಕೃತಿಗಿಲ್ಲ ಹಣ
Last Updated 14 ಮಾರ್ಚ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಾತಿ ನಿಗಮಗಳಿಗೆ ಧಾರಾಳವಾಗಿ ಹಣ ಹಂಚಿರುವ ರಾಜ್ಯ ಸರ್ಕಾರ, ನುಡಿ, ಗಡಿ, ಸಂಸ್ಕೃತಿಗೆ ಭಾರಿ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಿರುವುದು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

ಆಯವ್ಯಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ₹ 2 ಕೋಟಿ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 5 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಮರಾಠಾ ನಿಗಮಕ್ಕೆ ₹ 50 ಕೋಟಿ, ವೀರಶೈವ ಮತ್ತು ಒಕ್ಕಲಿಗ ನಿಗಮಕ್ಕೆ ತಲಾ ₹ 500 ಕೋಟಿ, ಅಲ್ಪಸಂಖ್ಯಾತರಿಗೆ ₹ 1,500 ಕೋಟಿ ಮೀಸಲಿಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2020–21ನೇ ಸಾಲಿನ ಬಜೆಟ್‌ನಲ್ಲಿ ₹ 259 ಕೋಟಿ ಹಂಚಿಕೆ ಮಾಡಿದ್ದ ಸರ್ಕಾರ, ಬಳಿಕ ಕೋವಿಡ್‌ ಕಾರಣಕ್ಕೆ ₹ 55 ಕೋಟಿ ಕಡಿತಗೊಳಿಸಿ, ₹ 192 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ಈ ಸಾಲಿನಲ್ಲಿ ಇನ್ನೂ ₹ 50 ಕೋಟಿ ಕಡಿತ ಮಾಡಲಾಗಿದೆ. ಕಲೆ, ಸಾಹಿತ್ಯ, ಕಲಾವಿದರ ಹಲವು ಯೋಜನೆಗಳಿಗೆ ಅನುದಾನ ಕಡಿತ ಮಾಡಿ, ಒಟ್ಟು ₹ 152 ಕೋಟಿ ಹಂಚಿಕೆಯಾಗಿದೆ.

‘ವಲಯವಾರು ಹಣ ಹಂಚಿಕೆ ಮಾಡಿದ್ದರಿಂದ ವಿವಿಧ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿರುವ ಅನುದಾನದ ಸ್ಪಷ್ಟ ಮಾಹಿತಿ ಅನೇಕರಿಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಸಂಘಟನೆಗಳು, ಕಲಾವಿದರು ವಿಚಾರಿಸುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಸ್ವಾತಂತ್ರ್ಯ ಯೋಧರ ಗ್ರಾಮಗಳ ಅಭಿವೃದ್ಧಿಗೆ ಕಳೆದ ಸಾಲಿನಲ್ಲಿ ₹ 1 ಕೋಟಿ ನೀಡಿದ್ದ ಸರ್ಕಾರ, ಸ್ವಾತಂತ್ರೋತ್ಸವದ 75ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನೇ ಕೈಬಿಟ್ಟಿದೆ. ಹಂಪಿ, ಕದಂಬ ಉತ್ಸವಕ್ಕೂ ಹಣ ಇಟ್ಟಿಲ್ಲ. ವೃತ್ತಿ ನಾಟಕ ಕಂಪನಿಗಳಿಗೆ ನೆರವು, ಸಾಂಸ್ಕೃತಿಕ ಚಟುವಟಿಕೆಯ ಪ್ರೋತ್ಸಾಹಕ್ಕೆ ಅನುದಾನ ಕಡಿತಗೊಳಿಸಲಾಗಿದೆ. ರಾಜ್ಯ, ರಾಷ್ಟ್ರೀಯ ಉತ್ಸವಗಳ ಆಚರಣೆಗೂ ಹಣ ಕಡಿಮೆ ಇಡಲಾಗಿದೆ. ಅಕಾಡೆಮಿಗಳು, ಪ್ರಾಧಿಕಾರಗಳ ಅನುದಾನಕ್ಕೂ ಕತ್ತರಿ ಪ್ರಯೋಗಿಸಲಾಗಿದೆ.

ಕನ್ನಡ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದ ಮಾಡಲು 2019–20ರಲ್ಲಿ ₹ 50 ಲಕ್ಷ ತೆಗೆದಿರಿಸಲಾಗಿತ್ತು. ಅದನ್ನು ಕಳೆದ ಸಾಲಿನಲ್ಲಿ ₹ 30 ಲಕ್ಷಕ್ಕೆ ಇಳಿಸಲಾಗಿದೆ. ಈ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇತ್ತಾದರೂ ಈ ಬಾರಿಯೂ ಅಷ್ಟೇ ಮೊತ್ತ ಹಂಚಿಕೆ ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಸಾಲಿನಲ್ಲಿ ₹ 2 ಕೋಟಿ ಮಾತ್ರ ನೀಡಲಾಗಿತ್ತು. ಆ ನಂತರ ಹೆಚ್ಚುವರಿಯಾಗಿ ₹ 3 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಅದರಲ್ಲಿ ₹ 1.25 ಕೋಟಿ ಮಾತ್ರ ಬಿಡುಗಡೆಯಾಗಿದೆ.

‘ಕನ್ನಡ ಕಾಯಕ’ಕ್ಕೂ ಹಣ ಇಲ್ಲ: ‘ಹೊರ ರಾಜ್ಯ, ಗಡಿಭಾಗದ ವಿದ್ಯಾರ್ಥಿಗಳಿಗೆ ಸೇರಿದಂತೆ ಕನ್ನಡ ಮಕ್ಕಳಿಗೆ ಪ್ರೋತ್ಸಾಹಧನ ನೀಡಲು ತಕ್ಷಣಕ್ಕೆ ₹ 8 ಕೋಟಿ ಬೇಕು. ಅನುದಾನ ಲಭ್ಯವಿಲ್ಲದೆ ಆ ಕಾರ್ಯಕ್ರಮವನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿಯಿದೆ. ₹ 40 ಲಕ್ಷ ಸಂಬಳಕ್ಕೇ ಬೇಕು, ₹ 20 ಲಕ್ಷ ಕೊಟ್ಟರೆ ಸಂಬಳ ಕೊಡುವುದು ಬೇಡವೇ? ‘ಕನ್ನಡ ಕಾಯಕ’ ವರ್ಷವೆಂದು ಘೋಷಿಸಿ ಸರ್ಕಾರ ₹ 10 ಕೋಟಿಗೆ ಆದೇಶ ಮಾಡಿದರೂ, ತಾಂತ್ರಿಕ ನೆಪ ಹೇಳಿ ಆರ್ಥಿಕ ಇಲಾಖೆ ಅಡ್ಡಗಾಲಿಟ್ಟಿದೆ. ಕನ್ನಡ ಕಾಯಕ ವರ್ಷದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಚಟುವಟಿಕೆ ಆಧಾರಿತ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇತ್ತು, ಅನುದಾನವೇ ಕೊಡದಿದ್ದರೆ ಹೇಗೆ?’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದರು.

‘ಗಡಿ’ಗೆ ಕೇವಲ ₹ 5 ಕೋಟಿ: ‘ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2019–20 ರಲ್ಲಿ ₹ 50 ಕೋಟಿ ನೀಡಲಾಗಿತ್ತು. ಅದನ್ನು ಕಳೆದ ಸಾಲಿನಲ್ಲಿ ₹25 ಕೋಟಿಗೆ ಇಳಿಸಲಾಗಿತ್ತು. ಈ ಬಾರಿ ಕಟ್ಟಡಗಳ ಕಾಮಗಾರಿಗೆಂದು ₹5 ಕೋಟಿ ಮಾತ್ರ ನೀಡಲಾಗಿದೆ. 2019–20 ರಲ್ಲಿ ಸರ್ಕಾರಿ ಆದೇಶ ಹೊರಡಿಸಿರುವ ಕಾಮಗಾರಿಯೂ ಸೇರಿ ಮುಂದುವರಿದ ಕಾಮಗಾರಿಗಳಿಗೆ ₹39 ಕೋಟಿ ಬೇಕಾಗಿದೆ. 2020–21 ನೇ ಸಾಲಿನಲ್ಲಿ ಅನುದಾನ ಕೊರತೆಯಿಂದ ಯಾವುದೇ ಹೊಸ ಯೋಜನೆಯನ್ನು ಪ್ರಾಧಿಕಾರ ಕೈಗೊಂಡಿಲ್ಲ’ ಎಂದೂ ಇಲಾಖೆಯ ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ, ಅವರು ಲಭ್ಯರಾಗಲಿಲ್ಲ.

* ಕನ್ನಡ ಸಾಂಸ್ಕೃತಿಕ ಹೆಜ್ಜೆ ಗುರುತುಗಳನ್ನು ಮೂಡಿಸುವ ಪ್ರಾಧಿಕಾರಗಳಿಗೆ ಸರ್ಕಾರ ಅನುದಾನ ಕೊಡದಿದ್ದರೆ ಹೇಗೆ? ಅದೂ ಈ ವರ್ಷ ‘ಕನ್ನಡ ಕಾಯಕ ವರ್ಷ’

- ಟಿ.ಎಸ್‌. ನಾಗಾಭರಣ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

* ಸಾಂಸ್ಕೃತಿಕ ವಿಷಯಗಳಲ್ಲಿ ಸರ್ಕಾರಕ್ಕೆ ಕಾಳಜಿ ಇರಬೇಕಿತ್ತು. ಅದು ಇಲ್ಲವಾಗುತ್ತಿದೆ. ಕೈಗೆ ಕಾಸು ಕೊಡದೆ ಕುರ್ಚಿಯಲ್ಲಿ ಕುಳಿತು ಜಪ ಮಾಡಿ ಹೋಗುವ ಸ್ಥಿತಿಯಿದೆ

- ಪ್ರೊ. ಎಂ.ಎ. ಹೆಗಡೆ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ

* ಕಳೆದ ಸಾಲಿನಲ್ಲಿ ಲಭ್ಯವಿದ್ದ ಅನುದಾನ ಸದ್ಬಳಕೆ ಮಾಡಿದ್ದೇವೆ. ಈ ಬಾರಿಯ ಚಟುವಟಿಕೆಗೆ ಕೊರತೆಯಾದರೆ ಸರ್ಕಾರ ಪೂರಕ ಅನುದಾನ ಕೊಡುವ ವಿಶ್ವಾಸವಿದೆ

- ಬಿ.ವಿ. ವಸಂತಕುಮಾರ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ

* ಗಡಿಭಾಗದ ಅವಶ್ಯಕತೆಗಳಿಗೆ ಅನುದಾನ ಕಡಿಮೆಯಿದೆ. ಆ ಭಾಗದ ಕನ್ನಡಿಗರ ಸ್ಥಿತಿಗತಿ ಅರಿತಿರುವ ಮುಖ್ಯಮಂತ್ರಿ ₹ 75 ಕೋಟಿಗೂ ಹೆಚ್ಚು ಅನುದಾನ ಕೊಡುವ ನಂಬಿಕೆಯಿದೆ

-ಸಿ. ಸೋಮಶೇಖರ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಆಯವ್ಯಯದಲ್ಲಿ ಅನುದಾನ ಹಂಚಿಕೆ (₹ ಕೋಟಿಗಳಲ್ಲಿ)

ಕಾರ್ಯಕ್ರಮ; 2020–21; 2021–22

ಕಲೆ, ಸಂಸ್ಕೃತಿಗೆ ಪ್ರೋತ್ಸಾಹ; 2.50; 2.00

ಸಂಘ, ಸಂಸ್ಥೆಗಳು; 4.39; 3.66

ಪರಿಶಿಷ್ಟ ಜಾತಿ ವಿಶೇಷ ಘಟಕ (ಎಸ್‌ಸಿಎಸ್‌ಪಿ); 15.00; 10.00

ಪರಿಶಿಷ್ಟ ವರ್ಗದ ವಿಶೇಷ ಘಟಕ (ಟಿಎಸ್‌ಪಿ); 5.00; 3.00

ವೃತ್ತಿ ನಾಟಕ ಕಂಪನಿಗಳು; 2.00; 1.50

ರಾಜ್ಯ, ರಾಷ್ಟ್ರೀಯ ಉತ್ಸವ; 9.00; 7.00

ವಿವಿಧ 16 ಅಕಾಡೆಮಿಗಳು; 8.00; 7.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT