ಗುರುವಾರ , ನವೆಂಬರ್ 26, 2020
22 °C

ಜಂಬೂ ಸವಾರಿ, ಕಾಣದ ಸಡಗರ: ಕೋವಿಡ್‌ ಭಯದಿಂದ ಬಂದಿಯಾದ ದೈವ – ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜನಸಾಮಾನ್ಯರಿಂದ ಕಿಕ್ಕಿರಿದು ತುಂಬಿರಬೇಕಿದ್ದ ಸಾಂಸ್ಕೃತಿಕ ನಗರಿಯ ರಾಜಪಥದಲ್ಲಿ ಸೋಮವಾರ ನೀರಸ ವಾತಾವರಣ. ವೃತ್ತಗಳು ಬಿಕೋ ಎನ್ನುತ್ತಿದ್ದರೆ, ಅರಮನೆ ಸುತ್ತ ನಿರ್ಬಂಧ. ಭಕ್ತಿಯ ಜಾಗದಲ್ಲಿ ಬರೀ ಆತಂಕ. ಸಡಗರ–ಜೈಕಾರ ಕೇಳಬೇಕಾಗಿದ್ದಲ್ಲಿ ನಿಶಬ್ದ!

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿಯ ಮೆರವಣಿಗೆಯು ಕಣ್ಣಿಗೆ ಕಾಣದ ವೈರಾಣುವಿನ ಭಯದಿಂದಾಗಿ, ಈ ಬಾರಿ ಅಂಬಾವಿಲಾಸ ಅರಮನೆ ಆವರಣದೊಳಗೆ ಬಂದಿಯಾಯಿತು. ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಜನರನ್ನು ಅನಿವಾರ್ಯವಾಗಿ ಮನೆಯಲ್ಲೇ ಕಟ್ಟಿಹಾಕಿತು. ಭವ್ಯ ಪರಂಪರೆಯ ವೈಭವ, ಸಂಭ್ರಮವನ್ನು ನೇರವಾಗಿ ಸವಿಯಲು ಕೋವಿಡ್‌ ಪರಿಸ್ಥಿತಿ ತಡೆಯೊಡ್ಡಿತು.

ಮಧ್ಯಾಹ್ನ 3 ಗಂಟೆಗೆ ಶುಭ ಮಕರ ಲಗ್ನದಲ್ಲಿ ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಐರಾವತ ಬಸ್ಸಿನಲ್ಲೇ ಅರಮನೆ ಆವರಣಕ್ಕೆ ಬಂದರು. 3.24ಕ್ಕೆ ಮೆರವಣಿಗೆ ಆರಂಭವಾಯಿತು. ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅವರು 3.54ಕ್ಕೆ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸಿದರು. ಗೌರವ ವಂದನೆ ಸಲ್ಲಿಸುತ್ತಿದ್ದಂತೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದರೆ, ಆವರಣದಲ್ಲಿ ಸೇರಿದ್ದವರು ತಲೆಬಾಗಿ ನಾಡದೇವತೆಗೆ ನಮಿಸಿದರು. ಈ ಕಾರ್ಯ 30 ನಿಮಿಷಗಳಲ್ಲಿ ನಡೆದು ಹೋಯಿತು.

ಮೊದಲ ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಜೊತೆ ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಹೆಜ್ಜೆ ಹಾಕಿದವು. ಕೇವಲ ಐದು ಆನೆಗಳು, ಐದು ಕಲಾ ತಂಡಗಳು, ಎರಡು ಸ್ತಬ್ಧಚಿತ್ರಗಳು, ಪೊಲೀಸ್‌ ಬ್ಯಾಂಡ್‌ ಹಾಗೂ ಅಶ್ವಾರೋಹಿ ಪಡೆ ಸಾಗಿದವು.

ಜಂಬೂಸವಾರಿ ಮಾರ್ಗ: ಅರಮನೆಯ ಮುಂಭಾಗದ ವರಾಹ ದ್ವಾರದಿಂದ ಬಲರಾಮ ದ್ವಾರದವರೆಗೆ ಕೇವಲ 300 ಮೀಟರ್‌ ದೂರಕ್ಕೆ
ಸೀಮಿತವಾಗಿ, ಮುಕ್ಕಾಲು ತಾಸಿನಲ್ಲಿ ಮೆರವಣಿಗೆ ಕೊನೆಗೊಂಡಿತು. ಇದರೊಂದಿಗೆ 410ನೇ ದಸರೆಯೂ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು.

500ಕ್ಕೂ ಹೆಚ್ಚು: ಅರಮನೆ ಆವರಣಕ್ಕೆ ಕೇವಲ 300 ಮಂದಿಗೆ ಪ್ರವೇಶಾವಕಾಶ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ಮೆರವಣಿಗೆ ಸಮಯದಲ್ಲಿ 500ಕ್ಕೂ ಅಧಿಕ ಮಂದಿ ಸೇರಿದ್ದು ಕಂಡುಬಂತು. ಕೋವಿಡ್‌ ನಿಯಮಾವಳಿಗಳು ದಾರಿ ತಪ್ಪಿದವು.

ರಾಜವಂಶಸ್ಥರ ಕಾರ್ಯ ಸಂಪನ್ನ: ಶರನ್ನವರಾತ್ರಿ ಆಚರಣೆ ಪ್ರಯುಕ್ತ ಅರಮನೆಯಲ್ಲಿ ರಾಜವಂಶಸ್ಥರು ಸರಳವಾಗಿ ನಡೆಸಿದ ಪೂಜಾ, ಕೈಂಕರ್ಯಗಳು ಸಂಪನ್ನಗೊಂಡವು. ಈ ಬಾರಿ ವಜ್ರಮುಷ್ಟಿ ಕಾಳಗವೂ ಇರಲಿಲ್ಲ. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕೂಡ ಇರಲಿಲ್ಲ.

ಕೋವಿಡ್‌, ಅತಿವೃಷ್ಟಿ ವಿರುದ್ಧ ವಿಜಯದ ವಿಶ್ವಾಸ

ಕೋವಿಡ್‌–19 ಹಾಗೂ ಅತಿವೃಷ್ಟಿಯಿಂದ ನಾಡಿನ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಇವುಗಳ ವಿರುದ್ಧ ವಿಜಯ ಸಾಧಿಸುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಭರವಸೆ ವ್ಯಕ್ತಪಡಿಸಿದರು.

ನಂದಿಧ್ವಜಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಸಮಸ್ಯೆಗಳಿಂದ ಪಾರು ಮಾಡಿ ಶಾಂತಿ–ನೆಮ್ಮದಿ, ಸೌಹಾರ್ದದ ಜೊತೆಗೆ ಆರೋಗ್ಯ ಕರುಣಿಸುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದಾಗಿ ಹೇಳಿದರು.

‘ಕೋವಿಡ್‌ ಕಾರಣದಿಂದಾಗಿ ಈ ಬಾರಿ ಸಂಪ್ರದಾಯಕ್ಕೆ ಸೀಮಿತವಾಗಿ ದಸರೆ ಆಚರಿಸುವುದು ಅನಿವಾರ್ಯವಾಗಿತ್ತು. ಕೋವಿಡ್‌ನಿಂದ ಮುಕ್ತವಾದ ಮೇಲೆ, ಮುಂದಿನ ಬಾರಿ ವಿಜೃಂಭಣೆಯಿಂದ ದಸರೆ ಆಚರಿಸಲಾಗುವುದು’ ಎಂದರು.

ಮನಗೆದ್ದ ಕೋವಿಡ್‌ ವಾರಿಯರ್‌

ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದು, ಮೆಚ್ಚುಗೆಗೆ ಪಾತ್ರವಾಗಿದ್ದು ಕೊರೊನಾ ಯೋಧರ ಸ್ತಬ್ಧಚಿತ್ರ. ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮೂಡಿಬಂದ ಸ್ತಬ್ಧಚಿತ್ರದಲ್ಲಿ, ಕೋವಿಡ್‌ ವಿರುದ್ಧ ಜಾಗೃತಿ ಮೂಡಿಸುವ ಅಂಶಗಳಿದ್ದವು. ವೈದ್ಯರು, ನರ್ಸ್‌ಗಳ ಕರ್ತವ್ಯಕ್ಕೆ ಗೌರವ ಸೂಚಿಸಲಾಯಿತು. ಕೊರೊನಾ ವಾರಿಯರ್‌, ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ತಬ್ಬಿಕೊಂಡಂತೆ ಪ್ರತಿಕೃತಿ ರಚಿಸಲಾಗಿತ್ತು. ಅದರಲ್ಲಿ, ‘ಕೋವಿಡ್‌–19 ವಿರುದ್ಧ ನಮ್ಮೆಲ್ಲರ ಹೋರಾಟ’ ಎಂಬ ಬರಹ ಇತ್ತು.

ವರ್ಚುವಲ್‌ನಲ್ಲೇ ಅಧಿಕ ವೀಕ್ಷಣೆ

‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್ ಸೇರಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಈ ಬಾರಿ ವಿಜಯದಶಮಿ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ಜನಸಾಮಾನ್ಯರಿಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದರಿಂದ, ಮನೆಯಲ್ಲೇ ಕುಳಿತು ಮೊಬೈಲ್‌, ಟಿ.ವಿಗಳಲ್ಲಿ ಮೆರವಣಿಗೆಯನ್ನು ವೀಕ್ಷಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು