ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ, ವೈದ್ಯ ಡಾ.ಎಂ.ಬಿ. ಮರಕಿಣಿ ನಿಧನ

Last Updated 18 ಆಗಸ್ಟ್ 2021, 10:24 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ, ವೈದ್ಯ ಹಾಗೂ ಸಮಾಜಸೇವಕ ಡಾ.ಎಂ.ಬಿ. ಮರಕಿಣಿ (90) ಅವರು ಬುಧವಾರ ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಅಮೆರಿಕದಲ್ಲಿರುವ ಮಗಳ ಮನೆಯಲ್ಲಿ ವಾಸವಿದ್ದರು. ಮಗ ನಾರಾಯಣ ಭಟ್‌, ಮಗಳು ಗೌರಿಯನ್ನು ಅವರು ಅಗಲಿದ್ದಾರೆ. ಪತ್ನಿ ಡಾ. ಸಬಿತಾ ಮರಕಿಣಿ ಅವರು ಈ ಹಿಂದೆಯೇ ಮೃತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮದ ಮರಕಿಣಿಯಲ್ಲಿ ಜನಿಸಿದ್ದ ಅವರು, ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ 1955ರಲ್ಲಿ ಪದವಿ ಪಡೆದಿದ್ದರು. ಕೆಲ ಕಾಲ ಸ್ವಗ್ರಾಮದಲ್ಲಿ ವೃತ್ತಿಪರ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡಿ, ಪತ್ನಿ ಡಾ. ಸಬಿತಾ ಭಟ್ ಅವರೊಂದಿಗೆ 1972ರಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಕಲಬುರ್ಗಿಯ ಚಿತ್ತಾಪುರದಲ್ಲಿ ಬಡವರಿಗಾಗಿ ಆಸ್ಪತ್ರೆ ಮತ್ತು ಶಾಲೆಗಳನ್ನು ಸ್ಥಾಪಿಸಿದ್ದರು.

1977ರಲ್ಲಿ ಆಂಧ್ರಪ್ರದೇಶವು ಭೀಕರ ಚಂಡಮಾರುತಕ್ಕೆ ತುತ್ತಾಗಿದ್ದಾಗ ಅಲ್ಲಿಗೆ ಧಾವಿಸಿ, ಅವೇರ್‌ ಸಂಸ್ಥೆಯೊಂದಿಗೆ ವೈದ್ಯಕೀಯ ಪರಿಹಾರ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೋದಾವರಿ ನದಿಯ ಎರಡೂ ದಡದ ಜನರಿಗಾಗಿ ಬೋಟ್‌ನಲ್ಲಿ ಚಿಕಿತ್ಸಾ ಕೇಂದ್ರ ತೆರೆಯುವ ಮೂಲಕ ‘ಬೋಟ್ ಡಾಕ್ಟರ್’ ಎಂದೇ ಪ್ರಸಿದ್ಧರಾಗಿದ್ದರು. ವಿವಿಧೆಡೆ ಪ್ರವಾಹ ಕಾಣಿಸಿಕೊಂಡಾಗ ಹಾಗೂ ಜನತೆ ಸಂಕಷ್ಟಕ್ಕೆ ಸಿಲುಕಿದಾಗ ವೈದ್ಯಕೀಯ ಸೇವೆ ನೀಡಿದ್ದಾರೆ.

ಇವರ ಸಾಮಾಜಿಕ ಮತ್ತು ವೈದ್ಯಕೀಯ ಸೇವೆಗೆ ಸರ್ಕಾರವು 2004ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಸಾಹಿತ್ಯ ಲೋಕಕ್ಕೆ ಕೂಡ ಅನನ್ಯವಾದ ಕೊಡುಗೆ ನೀಡಿದ್ದಾರೆ. 1960ರಲ್ಲೇ ಪುತ್ತೂರಿನಿಂದ ‘ವಿಚಾರವಾಣಿ’ ಸಾಹಿತ್ಯ ಪತ್ರಿಕೆಯನ್ನು ಹೊರತಂದು, ವಿವಿಧ ಲೇಖಕರಿಗೆ, ಯುವ ಕವಿಗಳಿಗೆ ಪ್ರೋತ್ಸಾಹಿಸಿದ್ದರು. ‘ಸುಧಾ’ ವಾರಪತ್ರಿಕೆಯಲ್ಲಿ ಪತ್ನಿ ಸಬಿತಾ ಅವರೊಂದಿಗೆ ‘ಅಜ್ಜಿ ಮದ್ದು’ ಅಂಕಣ ಬರೆಯುತ್ತಿದ್ದರು. ಅವರು ‌‘ವಿಷಚಿಕಿತ್ಸೆ’, ‘ಅಲೆಮಾರಿಯ ಆತ್ಮಕಥೆ’, ‘ಬರಗಾಲದಲ್ಲಿ ಧನ್ವಂತರಿ’, ‘ಮೊಗಲಾಯರ ಮಧ್ಯೆ ಧನ್ವಂತರಿ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT