ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ಗಂಟೆಯಲ್ಲಿ ಸ್ಮಶಾನದ ಒತ್ತುವರಿ ತೆರವು!

ಫಲ ನೀಡಿದ ಕಂದಾಯ ಸಚಿವರ ಮೊದಲ ಗ್ರಾಮ ವಾಸ್ತವ್ಯ
Last Updated 20 ಫೆಬ್ರುವರಿ 2021, 16:06 IST
ಅಕ್ಷರ ಗಾತ್ರ

ಜಿ. ಹೊಸಹಳ್ಳಿ (ದೊಡ್ಡಬಳ್ಳಾಪುರ): ಇಲ್ಲಿನ ಸಾರ್ವಜನಿಕ ಸ್ಮಶಾನದ ಬಹುಭಾಗ ಒತ್ತುವರಿಗೆ ಒಳಗಾಗಿದ್ದರಿಂದ, ಮೃತ ದೇಹಗಳನ್ನು ಅಂತ್ಯಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ಯುವುದಕ್ಕೂ ಕಷ್ಟಕರ ಸ್ಥಿತಿ ಇತ್ತು. ಆದರೆ, ಶನಿವಾರ ಎರಡೇ ಗಂಟೆಗಳಲ್ಲಿ ಸ್ಮಶಾನದ ಗಡಿಗಳನ್ನು ಗುರುತಿಸಿ, ಒತ್ತುವರಿ ತೆರವು ಮಾಡುವ ಕೆಲಸವೂ ಪೂರ್ಣಗೊಂಡಿತು.

ಇದಕ್ಕೆ ಕಾರಣವಾಗಿದ್ದು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಕಂದಾಯ ಸಚಿವ ಆರ್‌. ಅಶೋಕ ಅವರು ನಡೆಸಿದ ಗ್ರಾಮ ವಾಸ್ತವ್ಯ.

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಎಸ್‌ಪಿ ರವಿ ಡಿ. ಚನ್ನಣ್ಣನವರ್‌ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಬೆಳಿಗ್ಗೆಯೇ ಗ್ರಾಮಕ್ಕೆ ಬಂದ ಸಚಿವರು, ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಮಾರಮ್ಮ ದೇವಿಯ ದೇವಸ್ಥಾನಗಳಿಗೆ ಭೇಟಿನೀಡಿ ಪೂಜೆ ಸಲ್ಲಿಸಿದರು. ನಂತರ ಪರಿಶಿಷ್ಟ ಜಾತಿಯ ಜನರ ಕಾಲೊನಿಗೆ ಭೇಟಿನೀಡಿ ಅಹವಾಲು ಆಲಿಸಿದರು.

ಗ್ರಾಮದ ಸರ್ವೆ ನಂಬರ್‌ 149ರಲ್ಲಿ 2 ಎಕರೆ ಮತ್ತು ಸರ್ವೆ ನಂಬರ್‌ 150ರಲ್ಲಿ 2 ಎಕರೆ ಜಮೀನುಗಳನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ. ಸ.ನಂ. 150ರ ಜಮೀನನ್ನು ಪರಿಶಿಷ್ಟ ಜಾತಿಯವರು ಸ್ಮಶಾನಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಬಹುಪಾಲು ಒತ್ತುವರಿಗೆ ಒಳಗಾಗಿರುವುದನ್ನು ಅಲ್ಲಿನ ನಿವಾಸಿಗಳು ತಿಳಿಸಿದರು.

ತಕ್ಷಣವೇ ಸ್ಥಳದಲ್ಲಿದ್ದ ತಹಶೀಲ್ದಾರ್‌ ಹಾಗೂ ಭೂಮಾಪನ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ ಸಚಿವರು, ಸ್ಮಶಾನದ ಜಮೀನುಗಳನ್ನು ಅಳತೆ ಮಾಡಿ, ಗಡಿ ಗುರುತಿಸಿ, ವರದಿಯೊಂದಿಗೆ ಬರುವಂತೆ ಆದೇಶಿಸಿದರು. ಮೂರು ಗಂಟೆಗಳ ಗಡುವನ್ನೂ ನೀಡಿದರು.

ಎರಡೇ ಗಂಟೆಗಳಲ್ಲಿ ಕೆಲಸ ಮುಗಿಸಿದ ಅಧಿಕಾರಿಗಳು, ಸ.ನಂ. 150ರಲ್ಲಿ ಒಂದು ಎಕರೆಯಷ್ಟು ಮತ್ತು ಸ.ನಂ. 149ರಲ್ಲಿ ಅಲ್ಪ ಭಾಗ ಒತ್ತುವರಿಯಾಗಿರುವುದನ್ನು ಖಚಿತಪಡಿಸಿದರು. ಒತ್ತುವರಿ ತೆರವು ಮಾಡಿ, ಗಡಿ ಗುರುತಿಸಿದರು. ಬಳಿಕ ಸಚಿವರೂ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಪರಿಶಿಷ್ಟ ಜಾತಿಯವರು ಪ್ರತ್ಯೇಕವಾದ ಸ್ಮಶಾನ ಬಳಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅಶೋಕ, ‘ಎಲ್ಲರೂ ಒಂದೇ ಸ್ಮಶಾನ ಬಳಸಬೇಕು. ದಲಿತರು ಪ್ರತ್ಯೇಕವಾಗಿ ವಾಸ ಮಾಡುವುದನ್ನೂ ಬಿಡಬೇಕು’ ಎಂದರು.

ನಿವೇಶನಕ್ಕಾಗಿ 5 ಎಕರೆ

ಪರಿಶಿಷ್ಟ ಜಾತಿಯ ಕಾಲೊನಿ ಸೇರಿದಂತೆ ಗ್ರಾಮದ ಹೆಚ್ಚಿನ ಕುಟುಂಬಗಳಿಗೆ ವಸತಿ ಸಮಸ್ಯೆ ಇರುವುದು ಸಚಿವರ ಗಮನಕ್ಕೆ ಬಂತು. ಕೆಲವು ಕುಟುಂಬಗಳಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಣ್ಣ ಮನೆಗಳಲ್ಲಿ ವಾಸವಾಗಿರುವುದನ್ನು ಖುದ್ದಾಗಿ ಕಂಡರು. ವಸತಿ ಸೌಲಭ್ಯ ನೀಡಲು ನಿವೇಶನದ ಕೊರತೆ ಇರುವುದನ್ನು ಅಧಿಕಾರಿಗಳು ಗಮನಕ್ಕೆ ತಂದರು.

ಗ್ರಾಮ ಸ.ನಂ. 55ರಲ್ಲಿ 5 ಎಕರೆ ಜಮೀನನ್ನು ವಸತಿ ಉದ್ದೇಶಕ್ಕೆ ಸ್ಥಳದಲ್ಲೇ ಮಂಜೂರು ಮಾಡಿದ ಸಚಿವರು, ಗ್ರಾಮ ಪಂಚಾಯಿತಿಗೆ ಆದೇಶ ಪತ್ರ ಹಸ್ತಾಂತರಿಸಿದರು. ಸುಮಾರು 400 ಕುಟುಂಬಗಳಿಗೆ 20X30 ಅಳತೆಯ ನಿವೇಶನ ಹಂಚಿಕೆ ಮಾಡುವಂತೆ ನಿರ್ದೇಶನ ನೀಡಿದರು.

ಘನ ತ್ಯಾಜ್ಯ ಸಂಸ್ಕರಣಾ ಘಟಕ, ಹೊಂಗೆ ನೆಡುತೋಪು ನಿರ್ಮಾಣ, ಪೊಲೀಸ್‌ ಠಾಣೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ವಿದ್ಯಾರ್ಥಿ ನಿಲಯ, ಆರೋಗ್ಯ ಕೇಂದ್ರ ಮತ್ತು ಅಗ್ನಿಶಾಮಕ ಠಾಣೆಗಳಿಗೂ ಸಚಿವರು ಜಮೀನು ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT