ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಲದೊಡಲು ಬಗೆವವರಿಗೆ: ಒಳನೋಟ ಪ್ರತಿಕ್ರಿಯೆಗಳು

Last Updated 31 ಜನವರಿ 2021, 18:09 IST
ಅಕ್ಷರ ಗಾತ್ರ

ಬೆಂಗಳೂರು:‘ನೆಲದೊಡಲು ಬಗೆವವರಿಗೆ ‘ನೆರವು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಜ.31) ಪ್ರಕಟವಾದ ‘ಒಳನೋಟ’ ವರದಿಗೆ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ರಕ್ಷಕರಿಂದಲೇ ದಂಧೆ

ಗಣಿಗಾರಿಕೆ ಇಂದು ಹಲವರ ಪ್ರತಿಷ್ಠೆಯ ಕೆಲಸಗಳಲ್ಲಿ ಒಂದು. ಅಕ್ರಮಕ್ಕೆ ಕಡಿವಾಣ ಹಾಕಬೇಕಾದವರೆಈ ದಂಧೆಯಲ್ಲಿ ಮುಂಚೂಣಿಯಲ್ಲಿರುವುದು ವಿಪರ್ಯಾಸ. ದೊಡ್ಡವರ ದೊಡ್ಡತನಕ್ಕಾಗಿಅಕ್ರಮ ದಂಧೆಯಲ್ಲಿ ಜೀವತೆತ್ತ ಬಡವರು ಹಾಗೂ ಬೀದಿಗೆ ಬಂದ ಸಂಸಾರಗಳು ಅಪಾರ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ, ಭೂಮಿಗೆ ಹಾಗೂ ಬಡವರಿಗೆ ಅಪಾಯ ತಪ್ಪಿದ್ದಲ್ಲ.

–ಸುಮಾ, ಕೊಪ್ಪಳ

***

ಪ್ರಕೃತಿ ಮೇಲೆ ದಾಳಿ

ಹಸಿರು ಸಿರಿಯಿಂದ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳೆಲ್ಲ ಗಣಿಗಾರಿಕೆ ದಾಳಿಯಿಂದ ನೈಜ ಸ್ವರೂಪ ಕಳೆದುಕೊಂಡಿರುವುದನ್ನು ನೋಡಿ ಕಣ್ಣುಗಳಲ್ಲಿ ಹನಿಗೂಡಿವೆ. ಪ್ರಕೃತಿಯ ಸೃಷ್ಟಿಯನ್ನು ಮಾನವನ ದುರಾಸೆ ಕಬಳಿಸುತ್ತಿದೆ. ಇದಕ್ಕೆ ಕಾರಣಕರ್ತರನ್ನು ಹುಡುಕಿದರೆ, ಅಲ್ಲಿ ವ್ಯವಸ್ಥೆಯೇ ಮುಂಚೂಣಿಯಲ್ಲಿದೆ. ಧನದಾಹಿಗಳ ಕೈವಶದಿಂದ ಗಣಿಗಾರಿಕೆಗೆ ಮುಕ್ತಿ ನೀಡಬೇಕು. ಇಂತಹ ಹೀನ ಕೃತ್ಯಕ್ಕೆ ಬೆಂಗಾವಲಾಗಿ ನಿಂತಿರುವ ಅಧಿಕಾರ ಶ್ರೇಷ್ಠರ ಉದ್ದೇಶವೂ ತಿಳಿಯುತ್ತಿಲ್ಲ.

–ಗಾಯತ್ರಿ, ಧಾರವಾಡ

*

ಇಲಾಖೆ ಹಲ್ಲುಕಿತ್ತ ಹಾವು

ಅಕ್ರಮ ಗಣಿಗಾರಿಕೆ ಎಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಕ್ರಮವನ್ನು ನೋಡಿಯೂ ಮೌನ ತಾಳಿರುವುದು ದುರಂತ. ಸಿಬ್ಬಂದಿ ಕೊರತೆಯಿಂದ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗ ಹಲ್ಲುಕಿತ್ತ ಹಾವು. ಅಕ್ರಮ ಗಣಿಗಾರಿಕೆ ತಡೆಯುವುದು ಸರ್ಕಾರದ ಆದ್ಯತೆಯಾಗಲಿ.

–ರಂಗಮ್ಮ, ಹರಿಹರ

*

ನೀವು ಮಾಡಿದರೆ ಅಕ್ರಮ ಅಲ್ಲವೇ?

ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಾನೂನು ರೂಪಿಸುವ ಸರ್ಕಾರದ ಕಣ್ಣಿಗೆ ಅಕ್ರಮ ಗಣಿಗಾರಿಕೆ ಕಾಣಲೇ ಇಲ್ಲವೇ? ಇದರಲ್ಲಿ ರಾಜಕೀಯ ನಾಯಕರದ್ದೇ ಪ್ರಭಾವ ಎಂದು ತಿಳಿದಿದ್ದರೂ ಅವರು ಅಪರಾಧಿಗಳಂತೆ ಕಾಣುತ್ತಿಲ್ಲವೇ? ಸಮಾಜದ ರಕ್ಷಣೆ ಕಾರ್ಯ ಮಾಡಬೇಕಾದ ಮಹಾಶಯರು ಗಣಿಗಾರಿಕೆಯನ್ನು ಅಕ್ರಮ ಮಾಡಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ಶೋಭೆಯೇ?

–ಅರವಿಂದ, ಮಂಗಳೂರು

*

ಅನ್ನ ತಿಂದು ಭೂಮಿಗೆ ಕನ್ನ

ಹೊಲ ಉಳುಮೆ ಮಾಡಿ ರೈತ ಬೆಳೆಯುತ್ತಿದ್ದ ಬೆಳೆಗಳು, ದೇಶದ ಜನರಿಗೆ ಆಹಾರ ನೀಡಿ ಪ್ರಾಣ ಉಳಿಸಿದೆ. ಆದರೆ, ಅನ್ನ ನೀಡಿದ ಭೂತಾಯಿಯ ಮೇಲೆದುರಾಸೆಯಿಂದ ಗಣಿಕಾರಿಕೆ ನಡೆಸುತ್ತಿರುವ ವಿಚಾರ ತಿಳಿದು ಮನಸ್ಸಿಗೆ ನೋವಾಯಿತು. ಇರುವ ಅಲ್ಪಸ್ವಲ್ಪ ಭೂಮಿಯನ್ನೂ ಅಗೆದು, ಅಕ್ರಮದಲ್ಲಿ ತೊಡಗಿರುವವರಲ್ಲಿ ಜನಪ್ರತಿನಿಧಿಗಳೇ ಹೆಚ್ಚಾಗಿರುವುದು ವಿಷಾದನೀಯ. ಕೂಡಲೇ ಅಕ್ರಮ ಗಣಿಗಾರಿಕೆ ತಡೆದು, ಭೂಮಿಯನ್ನು ರಕ್ಷಿಸಬೇಕು.

-ಸಂತೋಷ ಕುಮಾರ, ಚಿತ್ರದುರ್ಗ

*

ಗಣಿಗಾರಿಕೆಗೆಕಣ್ಗಾವಲು ಇರಲಿ

ಗಣಿಗಾರಿಕೆಗೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸಬೇಕು. ಜನವಸತಿ ವಿರಳವಾಗಿರುವ ಪ್ರದೇಶಗಳಲ್ಲಿ ಮಾತ್ರ ಗಣಿಗಾರಿಕೆ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ಅಂಕಿ ಅಂಶಗಳನ್ನು ಮೀರಿಸುವ ಗಣಿಗಾರಿಕೆ ನಡೆಯುತ್ತಿದೆ. ಇವುಗಳ ಮೇಲೆ ನಿರಂತರ ದಾಳಿ ನಡೆಯಬೇಕು. ಪ್ರತಿ ತಿಂಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುವ ಗಣಿಗಾರಿಕೆಯ ಕುರಿತು ವರದಿ ಪರಿಶೀಲಿಸಬೇಕು.

ಅಶೋಕ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT